ಚೆಸ್‌: ಅಗ್ರಸ್ಥಾನಕ್ಕೇರಿದ ಗ್ರ್ಯಾಂಡ್‌ ಮಾಸ್ಟರ್‌ ಕೊನೆರು ಹಂಪಿ ಸೇಂಟ್‌ ಲೂಯಿಸ್‌, ಅಮೆರಿಕ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಕೊನೆರು ಹಂಪಿ ಅವರು ಕೈರನ್ಸ್‌ ಕಪ್‌ ಚೆಸ್‌ ಟೂರ್ನಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಶನಿವಾರ ರಾತ್ರಿ ನಡೆದ ಎಂಟನೇ ಸುತ್ತಿನ ಹಣಾಹಣಿಯಲ್ಲಿ ಹಂಪಿ, ರಷ್ಯಾದ ವ್ಯಾಲೆಂಟಿನಾ ಗುನಿನಾ ಅವರನ್ನು ಮಣಿಸಿದರು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 5.5ಕ್ಕೆ ಹೆಚ್ಚಿಸಿಕೊಂಡರು. ಅಂತಿಮ ಸುತ್ತಿನಲ್ಲಿ ಹಂಪಿ ಅವರು ಭಾರತದ ಡಿ. ಹರಿಕಾ ವಿರುದ್ಧ ಸೆಣಸಲಿದ್ದಾರೆ. ಹರಿಕಾ ಅವರು ಉಕ್ರೇನ್‌ನ ಮರಿಯಾ ಮುಜಿಚುಕ್‌ ವಿರುದ್ಧ ಡ್ರಾ ಮಾಡಿಕೊಂಡರು. ಅವರ ಖಾತೆಯಲ್ಲಿ ಸದ್ಯ ನಾಲ್ಕು ಪಾಯಿಂಟ್ಸ್‌ ಇವೆ. ಎಂಟನೇ ಸುತ್ತಿನ ಮತ್ತೊಂದು ಹಣಾಹಣಿಯಲ್ಲಿ 16 ವರ್ಷ ವಯಸ್ಸಿನ ಕ್ಯಾರಿಸಾ ಯಿಪ್‌ ಅವರು ಹಾಲಿ ಚಾಂಪಿಯನ್‌ ವೆನ್‌ಜುನ್‌ ಜು ಅವರಿಗೆ ಆಘಾತ ನೀಡಿದರು. ಅಮೆರಿಕದ ಯಿಪ್‌ ಮತ್ತು ಚೀನಾದ ಜು ನಡುವಣ ಹೋರಾಟ 61ನೇ ನಡೆಯಲ್ಲಿ ಮುಗಿಯಿತು. ಈ ಜಯದೊಂದಿಗೆ ಯಿಪ್‌ ಅವರು ಒಟ್ಟು ಪಾಯಿಂಟ್ಸ್‌ ಅನ್ನು 3.5ಕ್ಕೆ ಹೆಚ್ಚಿಸಿಕೊಂಡರು. ರಷ್ಯಾದ ಅಲೆಕ್ಸಾಂಡ್ರಾ ಕೊಸ್ತೆನಿಯುಕ್‌, ಎಂಟನೇ ಸುತ್ತಿನಲ್ಲಿ ಜಾರ್ಜಿಯಾದ ನ್ಯಾನ ಝಾಗ್ನಿದ್ಜ್‌ ಅವರನ್ನು ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.