ನಡಿಗೆ: ದಮನ್‌ ಸಿಂಗ್‌ಗೆ ಚಿನ್ನ ರಾಂಚಿ: ಮಣಿಪುರದ ಸನಬಮ್‌ ದಮನ್‌ ಸಿಂಗ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ 50 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಚಾಂಪಿಯನ್‌ಷಿಪ್‌ನ ಕೊನೆಯ ದಿನವಾದಭಾನುವಾರ ಅವರು ಈ ಸಾಧನೆ ಮಾಡಿದರು. 30 ವರ್ಷದ ಸಿಂಗ್‌, 4 ತಾಸು 8 ನಿಮಿಷ 10 ಸೆಕೆಂಡುಗಳಲ್ಲಿ ನಿಗದಿತ ಗುರಿ ತಲುಪಿದರು. ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು 3 ತಾಸು 50 ನಿಮಿಷದ ಅವಧಿ ಮಾನದಂಡವಾಗಿತ್ತು. ಪಂಜಾಬ್‌ನ ಗುರುಪ್ರೀತ್‌ ಸಿಂಗ್‌ (4 ತಾಸು 9 ನಿ. 44 ಸೆ.) ಎರಡನೇ ಸ್ಥಾನ ತಮ್ಮದಾಗಿಸಿಕೊಂಡರೆ, ಉತ್ತರ ಪ್ರದೇಶದ ಅಂಜನಿ ಸಿಂಗ್‌ 4 ತಾಸು 22 ನಿಮಿಷ 37 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಗಳಿಸಿದರು. 20 ವರ್ಷದೊಳಗಿನ ಪುರುಷರ 10 ಕಿ.ಮೀ ಸ್ಪರ್ಧೆಯಲ್ಲಿ ಹರಿಯಾಣದ ಅಮಿತ್‌ ಅವರಿಗೆ ಚಿನ್ನದ ಪದಕ ಒಲಿಯಿತು. ಅವರು ರಾಷ್ಟ್ರೀಯ ದಾಖಲೆ (40 ನಿಮಿಷ, 28 ಸೆಕೆಂಡುಗಳು) ನಿರ್ಮಿಸಿದರು. ಈ ಸ್ಪರ್ಧೆಯಲ್ಲಿ ಆರು ಅಥ್ಲೀಟ್‌ಗಳು ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮಾನದಂಡದ ಅವಧಿಯನ್ನು (43 ನಿ. 30 ಸೆ.) ದಾಟಿದರು. ಉತ್ತರಾಖಂಡದ ಪರಮ್‌ಜೀತ್‌ ಸಿಂಗ್‌, ಹರಿಯಾಣದ ಪ್ರವೀಣ್‌ ಕುಮಾರ್‌ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ತಮ್ಮದಾಗಿಸಿಕೊಂಡರು. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಮುನಿತಾ ಪ್ರಜಾಪತಿ ಚಿನ್ನ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.