ನರೇಂದ್ರಗೆ ಎರಡನೇ ಚಿನ್ನ ಭುವನೇಶ್ವರ: ಕರ್ನಾಟಕದ ಮಂಗಳೂರು ವಿವಿಯ ನರೇಂದ್ರ ಪ್ರತಾಪ್‌ಸಿಂಗ್‌ ಇಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಎರಡನೇ ಚಿನ್ನದ ಪದಕ ಗೆದ್ದುಕೊಂಡರು. ಕಳಿಂಗ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಕೂಟದ 5,000 ಮೀ. ಓಟದಲ್ಲಿಶನಿವಾರ ಅವರು ತಮ್ಮ ಹೆಸರಿನಲ್ಲಿದ್ದ ದಾಖಲೆಯನ್ನು ಸುಧಾರಿಸಿದರು. 14 ನಿಮಿಷ, 18.19 ಸೆಕೆಂಡುಗಳಲ್ಲಿ ಅವರು ನಿಗದಿಯ ಗುರಿ ಮುಟ್ಟಿದರು. ಈ ವಿಭಾಗದ ಬೆಳ್ಳಿಯೂ ಮಂಗಳೂರು ವಿವಿಯ ಆದೀಶ್‌ ಪಾಲಾಯಿತು. ಅವರು 14 ನಿಮಿಷ 27.71 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಕ್ರೀಡಾಕೂಟದ 10,000 ಮೀ. ಓಟದಲ್ಲೂ ನರೇಂದ್ರ ಚಿನ್ನಕ್ಕೆ ಕೊರಳೊಡ್ಡಿದ್ದರು. ‘5,000 ಮೀ. ನನ್ನ ನೆಚ್ಚಿನ ವಿಭಾಗ. ದಾಖಲೆ ಸುಧಾರಿಸುವುದು ದೊಡ್ಡ ಸವಾಲಾಗಿತ್ತು. ಸಂತೋಷವಾಗುತ್ತಿದೆ’ ಎಂದು ವಾಣಿಜ್ಯ ಪದವಿ ವಿದ್ಯಾರ್ಥಿ, 23 ವರ್ಷದ ನರೇಂದ್ರ ಹೇಳಿದ್ದಾರೆ. ದ್ಯುತಿ ಚಾಂದ್‌ ಚಿನ್ನದ ನಗು: ಭಾರತದ ಅತಿ ವೇಗದ ಓಟಗಾರ್ತಿ ಎನಿಸಿಕೊಂಡಿರುವ ದ್ಯುತಿ ಚಾಂದ್‌, 100 ಮೀಟರ್‌ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಭುವನೇಶ್ವರದ ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವಿವಿ ಪ್ರತಿನಿಧಿಸುತ್ತಿರುವ ಅವರು 11.49 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಮಂಗಳೂರು ವಿವಿಯ ಧನಲಕ್ಷ್ಮಿ ಎಸ್‌. (11.99 ಸೆಕೆಂಡು) ಈ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರೆ, ಕೇರಳದ ಮಹಾತ್ಮ ಗಾಂಧಿ ವಿವಿಯ ಸ್ನೇಹಾ ಎಸ್‌.ಎಸ್‌. ಕಂಚು ತಮ್ಮದಾಗಿಸಿಕೊಂಡರು. 2020ರ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಗೆ 11.15 ಸೆಕೆಂಡುಗಳು ಮಾನದಂಡವಾಗಿದೆ.ಕೂಟದ 200 ಮೀಟರ್‌ ಓಟದಲ್ಲೂ ದ್ಯುತಿ ಸ್ಪರ್ಧಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.