ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಇಂದಿನಿಂದ ಧಾರವಾಡ: ಕರ್ನಾಟಕ ಕುಸ್ತಿ ಹಬ್ಬದ ಗುಂಗು ದೂರವಾಗುವ ಮೊದಲೇ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಪೇಢಾ ನಗರಿ ನವವಧುವಿನಂತೆ ಸಿಂಗಾರಗೊಂಡಿದೆ. ಶುಕ್ರವಾರದಿಂದ ಮೂರು ದಿನ ಕ್ರೀಡಾಕೂಟ ನಡೆಯಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು 9 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು, ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು11 ಸಾವಿರ ಜನ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ‘ಕ್ರೀಡಾಕೂಟಕ್ಕಾಗಿ ನಗರದ 10 ಹೊರಾಂಗಣ ಕ್ರೀಡಾಂಗಣ ಮತ್ತು 6 ಒಳಾಂಗಣ ಕ್ರೀಡಾಂಗಣಗಳು ಸಜ್ಜುಗೊಂಡಿವೆ. ಒಟ್ಟು 48 ಕ್ರೀಡೆ ಮತ್ತು 28 ಸಾಂಸ್ಕೃತಿಕ ಸ್ಪರ್ಧೆಗಳನ್ನು ವೈಯಕ್ತಿಕ ಹಾಗೂ ಗುಂಪು ವಿಭಾಗದಲ್ಲಿ ನಡೆಸಲಾಗುತ್ತದೆ.ಕ್ರೀಡಾಕೂಟಕ್ಕೆ ರಾಜ್ಯ ಸರ್ಕಾರ ₹2ಕೋಟಿ ಅನುದಾನ ಮೀಸಲಿಟ್ಟಿದ್ದು, ಈಗಾಗಲೇ ₹1ಕೋಟಿ ಮಂಜೂರು ಮಾಡಿದೆ. ಜತೆಗೆ ಕ್ರೀಡಾಪಟುಗಳಿಗೆ ಮೂರು ದಿನಗಳ ಒಒಡಿ ಸೌಲಭ್ಯ ಸಿಗಲಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಫ್.ಸಿದ್ಧನಗೌಡರ ತಿಳಿಸಿದರು. ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.