ಕಬಡ್ಡಿ: ಕ್ವಾರ್ಟರ್‌ನಲ್ಲಿ ಎಡವಿದ ಕರ್ನಾಟಕ ಬೆಂಗಳೂರು: ಕರ್ನಾಟಕದ ಪುರುಷರ ತಂಡದವರು ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೀನಿಯರ್‌ ಕಬಡ್ಡಿ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ನಿರಾಸೆ ಕಂಡಿದ್ದಾರೆ. ಪೂರ್ಣಿಮಾ ವಿಶ್ವವಿದ್ಯಾಲಯದ ಅಂಗಳದಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ರಾಜ್ಯ ತಂಡ 23–54 ಪಾಯಿಂಟ್ಸ್‌ನಿಂದ ಸರ್ವಿಸಸ್‌ ವಿರುದ್ಧ ಸೋತಿತು. ಕರ್ನಾಟಕ ತಂಡದ ಸುಕೇಶ್‌ ಹೆಗ್ಡೆ ಮತ್ತು ಟಿ.ಆರ್‌.ಪವನ್‌ ಅವರು ಕ್ರಮವಾಗಿ ಎಂಟು ಮತ್ತು ನಾಲ್ಕು ಪಾಯಿಂಟ್ಸ್‌ ಗಳಿಸಿದರು. ಸರ್ವಿಸಸ್‌ ತಂಡದ ನವೀನ್‌ ಕುಮಾರ್‌ ರೇಡಿಂಗ್‌ನಲ್ಲಿ ಮಿಂಚಿದರು. ಅವರು ಒಟ್ಟು 15 ಪಾಯಿಂಟ್ಸ್‌ ಕಲೆಹಾಕಿದರು. ರೋಹಿತ್‌ ಕುಮಾರ್‌ ಮತ್ತು ನಿತಿನ್‌ ತೋಮರ್ ಅವರು ಕ್ರಮವಾಗಿ ಆರು ಮತ್ತು ಐದು ಪಾಯಿಂಟ್ಸ್‌ ಹೆಕ್ಕಿದರು. ಇದಕ್ಕೂ ಮುನ್ನ ನಡೆದಿದ್ದ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಕರ್ನಾಟಕ 41–27 ಪಾಯಿಂಟ್ಸ್‌ನಿಂದ ಹಿಮಾಚಲ ಪ್ರದೇಶ ವಿರುದ್ಧ ಜಯಿಸಿತ್ತು. ಈ ಪಂದ್ಯದಲ್ಲಿ ಸುಕೇಶ್‌ ಮತ್ತು ಪ್ರಶಾಂತ್‌ ಕುಮಾರ್‌ ರೈ ಅವರು ಕ್ರಮವಾಗಿ ಏಳು ಮತ್ತು ಆರು ಪಾಯಿಂಟ್ಸ್‌ ಕಲೆಹಾಕಿದ್ದರು. ಮಲ್ಲಿಕಾರ್ಜುನ ಜಕನೂರು ಮತ್ತು ಬಿ.ಎಸ್‌.ಸಂತೋಷ್‌ ಅವರು ತಲಾ ನಾಲ್ಕು ಪಾಯಿಂಟ್ಸ್‌ ಗಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.