ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧು ಶುಭಾರಂಭ ಬರ್ಮಿಂಗ್‌ಹ್ಯಾಂ: ವಿಶ್ವ ಚಾಂಪಿಯನ್‌ ಭಾರತದ ಪಿ.ವಿ.ಸಿಂಧು, ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಬುಧವಾರ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು ಅಮೆರಿಕದ ಬೀವೆನ್‌ ಜಾಂಗ್‌ ಅವರನ್ನು ಮಣಿಸಿದರು. ಆರನೇ ಶ್ರೇಯಾಂಕದ ಹಾಗೂ ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಸಿಂಧು, 42 ನಿಮಿಷಗಳ ಆಟದಲ್ಲಿ‌21–14, 21–17ರಿಂದ ಸುಲಭವಾಗಿ ಗೆದ್ದರು. ಎರಡನೇ ಗೇಮ್‌ನಲ್ಲಿ ಮಾತ್ರ ಹೋರಾಟ ಕಂಡುಬಂತು. ಮುಂದಿನ ಸುತ್ತಿನಲ್ಲಿ ಸಿಂಧು ಅವರು ಕೊರಿಯಾದ ಸಂಗ್‌ ಜಿ ಹ್ಯೂನ್‌ ಅವರನ್ನು ಎದುರಿಸಲಿದ್ದಾರೆ. ಇಲ್ಲಿ ಗೆದ್ದರೆ ಕ್ವಾರ್ಟರ್‌ಫೈನಲ್‌ ತಲುಪಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್‌, 15–21, 16–21ರಿಂದ ಚೀನಾದ ಚೆನ್‌ ಲಾಂಗ್‌ ಎದುರು ಸೋತರು. ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದಿದ್ದ ಪ್ರಣವ್‌ ಜೆರಿ ಚೋಪ್ರಾ ಹಾಗೂ ಎನ್‌.ಸಿಕ್ಕಿ ರೆಡ್ಡಿ ಜೋಡಿಯು 13–21, 21–11, 17–21ರಿಂದ ಚೀನಾದ ಅಗ್ರ ಶ್ರೇಯಾಂಕದ ಸಿ ವೇ ಜಾಂಗ್‌–ಯಾ ಕಿಯಾಂಗ್‌ ಹುವಾಂಗ್‌ ಎದುರು ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.