ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಅಕ್ಸೆಲ್ಸನ್ ಲಂಡನ್: ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ಬರ್ಮಿಂಗ್‌ಹ್ಯಾಂನಲ್ಲಿ ಭಾನುವಾರ ಕೊನೆಗೊಂಡ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅರೆನಾ ಬರ್ಮಿಂಗ್‌ಹ್ಯಾಂ ಅಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅವರು ಚೀನಾ ತೈಪೆಯ ಚೌ ಟೀನ್ ಚೆನ್ ವಿರುದ್ಧ 21–13, 21–14 ಗೇಮ್‌ಗಳಿಂದ ಗೆಲುವು ಸಾಧಿಸಿದರು. ಈ ಮೊದಲು ಒಟ್ಟು 11 ಬಾರಿ ಇವರಿಬ್ಬರು ಮುಖಾಮುಖಿಯಾಗಿದ್ದರು. ಈ ಪೈಕಿ 10 ಬಾರಿ ಅಕ್ಸೆಲ್ಸನ್ ಗೆಲುವು ಸಾಧಿಸಿದ್ದರು. ಭಾನುವಾರದ ಪಂದ್ಯದಲ್ಲೂ ಅವರು ನಿರಾಯಾಸವಾಗಿ ಗೆದ್ದರು. 46 ನಿಮಿಷಗಳಲ್ಲಿ ಪಂದ್ಯ ಕೊನೆಗೊಂಡಿತು. ಮಹಿಳೆಯರ ಡಬಲ್ಸ್‌ನಲ್ಲಿ ಜಪಾನ್‌ನ ಯೂ ಕಿ ಫುಕುಶಿಮಾ ಮತ್ತು ಸಯಾಕ ಹಿರೋಟ ಜೋಡಿ ಚೀನಾದ ಡು ಯೇ ಮತ್ತು ಲಿ ಯಿನ್ ಹ್ಯೂ ಅವರನ್ನು 21–13, 21–15ರಲ್ಲಿ ಮಣಿಸಿತು. ಮಿಶ್ರ ಡಬಲ್ಸ್ ವಿಭಾಗದ ಪ್ರಶಸ್ತಿ ಇಂಡೊನೇಷ್ಯಾದ ಪ್ರವೀಣ್ ಜೋರ್ಡನ್ ಮತ್ತು ಮೇಲಾತಿ ದೇವ ಒಕ್ಟವ್ಯಂತಿ ಅವರ ಪಾಲಾಯಿತು. ಥಾಯ್ಲೆಂಡ್‌ನ ದೆಚಾಪಾಲ್ ಹಾಗೂ ಸಾಸ್ಪ್ರಿ ತೆರಟಂಚಯ್ ವಿರುದ್ಧ ಇಂಡೊನೇಷ್ಯಾ ಜೋಡಿ 21–15, 17–21, 21–8ರಲ್ಲಿ ಗೆಲುವು ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.