ವೃತ್ತಿಪರ ಬಾಕ್ಸಿಂಗ್‌: ನೀರಜ್‌ಗೆ ಸುಲಭ ಜಯ ನವದೆಹಲಿ: ಭಾರತದ ಬಾಕ್ಸರ್‌ ನೀರಜ್‌ ಗೋಯತ್‌ ಶನಿವಾರ ಆಕ್ಲೆಂಡ್‌ನಲ್ಲಿ ನಡೆದ ವೃತ್ತಿಪರ ಬಾಕ್ಸಿಂಗ್‌ ಸೆಣಸಾಟದಲ್ಲಿ ನ್ಯೂಜಿಲೆಂಡ್‌ನ ಒಬೆಡಿ ಮಗುಚಿ ಅವರನ್ನು ಸೋಲಿಸಿದರು. ಕಳೆದ ವರ್ಷದ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ನಂತರ ಇದು ಅವರ ಮೊದಲ ಸೆಣಸಾಟವಾಗಿತ್ತು. ಆರು ಸುತ್ತುಗಳ ಈ ಸ್ಪರ್ಧೆ ಎರಡು ಸುತ್ತುಗಳಲ್ಲಿ ಮುಗಿಯಿತು. ‘ಎದುರಾಳಿ ಎರಡು ಸುತ್ತುಗಳಲ್ಲೇ ಸೋಲನ್ನು ಒಪ್ಪಿಕೊಂಡರು. ಅಂತಿಮವಾಗಿ ಈ ಹೋರಾಟ ನಿರೀಕ್ಷೆಗಿಂತ ಸುಲಭವಾಯಿತು’ ಎಂದು ನೀರಜ್‌ ಹೇಳಿದರು. ಐದು ಸೆಣಸಾಟಗಳ ಅನುಭವದೊಡನೆ ಮೆಗುಚಿ ಕಣಕ್ಕಿಳಿದಿದ್ದರು. ಅವರು ಆ ಐದರಲ್ಲಿ ಮೂರರಲ್ಲಿ ಗೆಲುವು ಕಂಡಿದ್ದರು. ಇನ್ನೊಂದು ಕಡೆ, 27 ವರ್ಷದ ನೀರಜ್‌ 16 ಸೆಣಸಾಟಗಳಲ್ಲಿ 11ರಲ್ಲಿ ಜಯಗಳಿಸಿದ ಅನುಭವದೊಡನೆ ಆಡಲು ಇಳಿದಿದ್ದರು. ಹರಿಯಾಣದ ಈ ಬಾಕ್ಸರ್‌, ಕಳೆದ ವರ್ಷದ ಜೂನ್‌ನಲ್ಲಿ ದೆಹಲಿಯಲ್ಲಿ ತರಬೇತಿ ಮುಗಿಸಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಅಪಘಾತದ ವೇಳೆ ಗಾಯಗೊಂಡಿದ್ದರು. ಹೀಗಾಗಿ ಅವರು ಬ್ರಿಟನ್‌ನ ಬಾಕ್ಸಿಂಗ್‌ ತಾರೆ ಅಮೀರ್‌ ಖಾನ್‌ ಎದುರಿನ ಡಬ್ಲ್ಯುಬಿಸಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಆಗಿರಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.