ಜಪಾನ್ ಸುಮೊ ಪಟುವಿಗೆ ಕೋವಿಡ್-19 ಟೋಕಿಯೊ: ಕೋವಿಡ್ ಸೋಂಕು ಪುರಾತನ ಸುಮೊ ಕ್ರೀಡೆಗೂ ವಕ್ಕರಿಸಿದೆ. ಜಪಾನ್‌ನಲ್ಲಿ ಸುಮೊ ಪಟುವಿನಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ ಎಂದು ಇಲ್ಲಿನ ಸೊಮೊ ಸಂಸ್ಥೆ ತಿಳಿಸಿದೆ. ರ‍್ಯಾಂಕಿಂಗ್‌ನಲ್ಲಿ ಕೆಳ ಕ್ರಮಾಂಕದಲ್ಲಿದ್ದ ಕ್ರೀಡಾಪಟುವಿಗೆ ಕಳೆದ ವಾರ ಜ್ವರ ಕಾಣಿಸಿಕೊಂಡಿತ್ತು. ಅವರ ಪರೀಕ್ಷಾ ವರದಿ ಶುಕ್ರವಾರ ಲಭಿಸಿದೆ ಎಂದು ತಿಳಿಸಿರುವ ಸಂಸ್ಥೆ ಆ ವ್ಯಕ್ತಿಯ ಹೆಸರು ಮತ್ತು ಆರೋಗ್ಯ ಸ್ಥಿತಿಯ ಮಾಹಿತಿ ಬಹಿರಂಗಪಡಿಸಲಾಗುವುದಿಲ್ಲ ಎಂದು ತಿಳಿಸಿದೆ. ಬೇರೆ ಯಾವುದೇ ಕ್ರೀಡಾಪಟುವಿಗಾಗಲಿ ಸಿಬ್ಬಂದಿಗಾಗಲಿ ಸೋಂಕಿನ ಲಕ್ಷಣಗಳಿಲ್ಲ. ಸೋಂಕು ಇರುವವರನ್ನು ಆರೋಗ್ಯ ಅಧಿಕಾರಿಗಳ ಸಲಹೆ ಪ್ರಕಾರ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದೂ ಸ್ಪಷ್ಟಪಿಡಿಸಿದೆ. ‘ಜಪಾನ್‌ನಲ್ಲಿ ಸುಮೊಪಟುಗಳ ನಿತ್ಯದ ಅಭ್ಯಾಸ ಮುಂದುವರಿದಿದ್ದು ದಿನದಲ್ಲಿ ಎರಡು ಬಾರಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಎಲ್ಲ ಬಗೆಯ ಮನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗತ್ಯ ಇದ್ದಲ್ಲಿ ಮಾಸ್ಕ್ ಧರಿಸಲಾಗುತ್ತಿದೆ’ ಎಂದು ಸಂಸ್ಥೆಯ ಪ್ರತಿನಿಧಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.