ಆನ್‌‌ಲೈನ್ ಟೂರ್ನಿ ಸುಗ್ಗಿ ಜನಪ್ರಿಯ ಚೆಸ್‌ ವೆಬ್‌ಸೈಟ್‌ಗಳಲ್ಲಿ ಮುಂಚೂಣಿಯಲ್ಲಿರುವ ಚೆಸ್‌.ಕಾಮ್‌ (.) ಅತಿ ತೀರಾ ಅಪರೂಪ ಎಂಬಂತೆ ಇತ್ತೀಚೆಗೆ ಕ್ರ್ಯಾಶ್‌ ಆಗಿತ್ತು. ಅಂದು ಅಂದಾಜು ಐದು ಕೋಟಿ ಮಂದಿ ಚೆಸ್‌ ಆಸಕ್ತರು ಏಕ ಕಾಲಕ್ಕೆ ಲಾಗಿನ್‌ ಆಗಿದ್ದರು! ಆನ್‌ಲೈನ್‌ ಚೆಸ್‌ ಆಟಗಾರರ ಸಂಖ್ಯೆ ಕಳೆದ ಕೆಲಸಮಯದಿಂದ ಒಂದೇಸಮನೆ ಏರುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ. ಒಂದೆಡೆ ವಿಶ್ವದಾದ್ಯಂತ ಕೊರೊನಾ ಸೋಂಕು ‍ಪ್ರಮಾಣ ಯದ್ವಾತದ್ವಾ ಏರುತ್ತಿದೆ. ಇನ್ನೊಂದು ಕಡೆಆನ್‌ಲೈನ್‌ ಚೆಸ್‌ ಆಟಗಾರರ ಸಂಖ್ಯೆಯೂ ಗಮನಾರ್ಹಗಾಗಿ ಏರುತ್ತಿದೆ. ‘ಪ್ರಮುಖ ದೇಶಗಳಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವ ಕಾರಣ ಎಲ್ಲರೂ ಗೃಹಬಂಧಿಗಳಾಗಿದ್ದಾರೆ. ಹೀಗಾಗಿಆನ್‌ಲೈನ್‌ ಚೆಸ್‌ ಟೂರ್ನಿಗಳ ಸಂಖ್ಯೆ ಹೆಚ್ಚುತ್ತಿದೆ. ವಿಶ್ವದ ಪ್ರಮುಖ ಆಟಗಾರರೆಲ್ಲರೂ ಈ ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ಇದರ ಬೇಡಿಕೆ ಸುಮಾರು 3–4 ಪಟ್ಟು ಹೆಚ್ಚಿದೆ‘ ಎಂದು ವಿಶ್ಲೇಷಿಸುತ್ತಾರೆ ಕರ್ನಾಟಕದ ಗ್ರ್ಯಾಂಡ್‌ಮಾಸ್ಟರ್‌ ಜಿ.ಎ.ಸ್ಟ್ಯಾನಿ. ಹೀಗಾಗಿಆನ್‌ಲೈನ್‌ ಗೇಮಿಂಗ್‌ ಪ್ಲಾಟ್‌ಫಾರ್ಮ್‌ಗಳಿಗೆ ಬೇಡಿಕೆ ಏರಿದೆ. ಚೆಸ್‌.ಕಾಮ್‌, ಪ್ಲೇಚೆಸ್‌.ಕಾಮ್‌, ಲಿಚೆಸ್‌ ಇಂಥ ಜಾಲತಾಣಗಳುಆನ್‌ಲೈನ್‌ ಆಡುವವರಿಗೆ ವೇದಿಕೆಗಳಾಗಿವೆ. ‘ಆನ್‌ಲೈನ್‌ನಲ್ಲಿ ಆಡುವವರ ಜೊತೆ ಆನ್‌ಲೈನಲ್ಲಿ ತರಬೇತಿ ಪಡೆಯುವವರ ಸಂಖ್ಯೆಯೂ ಏರುಗತಿಯಲ್ಲಿದೆ. ಇದು ಸುಲಭ ವಿಧಾನ ಕೂಡ. ಭಾರತದಲ್ಲಿ ಸುಮಾರು 30 ಮಂದಿ ಗ್ರ್ಯಾಂಡ್‌ಮಾಸ್ಟರ್‌ಗಳು ತರಬೇತಿಯನ್ನೂ ನೀಡುತ್ತಿದ್ದಾರೆ‘ ಎನ್ನುತ್ತಾರೆ ಅವರು. ಶಿವಮೊಗ್ಗದವರಾದ ಸ್ಟ್ಯಾನಿ ಅವರು ಕರ್ನಾಟಕದ ಮೂವರು, ಅಮೆರಿಕ, ಕೆನಡಾದ ಒಬ್ಬೊಬ್ಬ ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ. ‘ಆನ್‌ಲೈನ್‌ ತರಬೇತಿ ಹೆಚ್ಚು ವೇಗ ಪಡೆಯುತ್ತಿದೆ. ನಾನು ಸದ್ಯ ಐದು ಮಂದಿಗೆ ತರಬೇತಿ ನೀಡುತ್ತಿದ್ದೇನೆ’ ಎಂದು ಹೇಳುತ್ತಾರೆ. 2018ರಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಪಟ್ಟಕ್ಕೇರಿದ್ದ ಸ್ಟ್ಯಾನಿ, ಈ ಗೌರವ ಪಡೆದ ಕರ್ನಾಟಕದ ಎರಡನೇ ಆಟಗಾರ ಎನಿಸಿದ್ದರು. ಅನುಭವಿ ಐಎಂ, ಚೆನ್ನೈನ ವಿ.ಶರಣವನ್ ಅವರಿಂದ ಸದ್ಯ ಮಾರ್ಗದರ್ಶನ ಪಡೆಯುತ್ತಿರುವ 27 ವರ್ಷದ ಸ್ಟ್ಯಾನಿ, ಫ್ರಾನ್ಸ್‌ನಲ್ಲಿ ನಡೆದ ಟೂರ್ನಿಯೊಂದರಲ್ಲಿ ಆಡಿ ಫೆಬ್ರುವರಿ ಕೊನೆಯ ವಾರ ತವರಿಗೆ ಮರಳಿದ್ದರು. ಆದರೆ ಅವರ ಮುಂದಿನ ಯೋಜನೆಗಳು ಈಗ ಲಾಕ್‌ಡೌನ್‌ ಕಾರಣ ರದ್ದಾಗಿವೆ. ‘ಈ ತಿಂಗಳ ಮಧ್ಯದಲ್ಲಿ ನಾನು ಯುರೋಪ್‌ನ ಟೂರ್ನಿಗಳಲ್ಲಿ ಆಡಲು ಹೋಗಬೇಕಾಗಿತ್ತು. ಫ್ರಾನ್ಸ್‌, ಹಂಗೆರಿ, ಝೆಕ್‌ ರಿಪಬ್ಲಿಕ್‌ ದೇಶಗಳಲ್ಲಿ ಟೂರ್ನಿಗಳನ್ನು ಆಡುವ ಉದ್ದೇಶವಿತ್ತು. ಆದರೆ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಕಾರಣ ಅವೆಲ್ಲವೂ ಈಗ ರದ್ದಾಗಿವೆ‘ ಎಂದು ಸ್ಟ್ಯಾನಿ ಹೇಳುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.