ಕ್ರೀಡಾ ಸಚಿವಾಲಯ ಸಭೆ ಇಂದು ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯವು 11 ಕ್ರೀಡಾ ಫೆಡರೇಷನ್‌ಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಹತ್ವದ ಸಭೆ ನಡೆಸಲಿದೆ. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಕ್ರೀಡಾ ಇಲಾಖೆಯ ಕಾರ್ಯದರ್ಶಿ ರಾಧೇಶ್ಯಾಮ್‌ ಜುಲಾನಿಯಾ ಅವರು ಪ್ರತಿ ಫೆಡರೇಷನ್‌ನ ಇಬ್ಬರು ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಿದ್ದಾರೆ ಎಂದು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಲ್ಲಿರುವ(ಎನ್‌ಎಸ್‌ಎಫ್‌) ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ. 11 ಫೆಡರೇಷನ್‌ಗಳನ್ನು ಆದ್ಯತೆಯ ಮೇರೆಗೆ ಎರಡು ಬ್ಯಾಚ್‌ಗಳಾಗಿ ಮಾಡಿಕೊಂಡು ಸಚಿವಾಲಯ ಚರ್ಚೆ ನಡೆಸಲಿದೆ. ಮೊದಲ ಬ್ಯಾಚ್‌ನಲ್ಲಿ ಹ್ಯಾಂಡ್‌ ಬಾಲ್‌, ಬ್ಯಾಸ್ಕೆಟ್‌ಬಾಲ್‌, ವಾಲಿಬಾಲ್‌, ವುಷು, ಟೆನಿಸ್‌, ಸ್ಕ್ವಾಷ್‌, ವಿಶೇಷ ಒಲಿಂಪಿಕ್ಸ್‌ ಭಾರತ್‌, ಯಾಚಿಂಗ್‌, ಕಯಾಕಿಂಗ್‌ ಹಾಗೂ ಕ್ಯಾನೊಯಿಂಗ್‌, ಕಬಡ್ಡಿ ಮತ್ತು ಆಲ್‌ ಇಂಡಿಯಾ ಯೂನಿವರ್ಸಿಟಿ ಫೆಡರೇಷನ್‌ಗಳು ಪಾಲ್ಗೊಳ್ಳಲಿವೆ. ಸಭೆ ನಡೆಯುವುದು ನಿಜ ಎಂದಿರುವಅಖಿಲ ಭಾರತ ಟೆನಿಸ್‌ ಅಸೋಸಿಯೇಷನ್‌ (ಎಐಟಿಎ) ಕಾರ್ಯ ನಿರ್ವಾಹಕ ಅಧಿಕಾರಿ ಅಕೌರಿ ಬಿಶ್ವದೀಪ್‌ ಅವರು, ಅದರ ಕಾರ್ಯಸೂಚಿ ಏನೆಂಬುದನ್ನು ಬಹಿರಂಗಪಡಿಸಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.