ಫೆಡರೇಷನ್‌ಗಳೊಂದಿಗೆ ಸಭೆ ನಡೆಸಿದ ಸಚಿವಾಲಯ ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯವು 11 ರಾಷ್ಟ್ರೀಯ ಫೆಡರೇಷನ್‌ಗಳೊಂದಿಗೆ (ಎನ್‌ಎಸ್‌ಎಫ್‌) ಗುರುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಹತ್ವದ ಸಭೆ ನಡೆಸಿತು. 2021ರ ಟೋಕಿಯೊ ಒಲಿಂಪಿಕ್ಸ್‌ಗೆ ಪೂರಕವಾಗಿ ಯಾವೆಲ್ಲಾ ಯೋಜನೆಗಳನ್ನು ಸಿದ್ಧಪಡಿಸಿದ್ದೀರಿ ಎಂಬ ಮಾಹಿತಿ ಪಡೆದುಕೊಂಡಿತು. ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್‌ ಜುಲಾನಿಯಾ ಅವರು ಹೋದ ವಾರ, ಹಾಕಿ ಇಂಡಿಯಾ, ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್‌ಆರ್‌ಎಐ) ಮತ್ತು ಭಾರತ ಕುಸ್ತಿ ಫೆಡರೇಷನ್ ಸೇರಿದಂತೆ ಇತರೆ ಕೆಲ ಫೆಡರೇಷನ್‌ಗಳ ಜೊತೆ ಸಭೆ ನಡೆಸಿದ್ದರು. ಗುರುವಾರದ ಸಭೆಯಲ್ಲಿ ರಾಧೇಶ್ಯಾಮ್‌ ಅವರು ಹ್ಯಾಂಡ್‌ಬಾಲ್‌, ಟೆನಿಸ್‌, ಸ್ಕ್ವಾಷ್‌, ಬ್ಯಾಸ್ಕೆಟ್‌ಬಾಲ್‌, ವಿಶೇಷ ಒಲಿಂಪಿಕ್ಸ್‌ ಭಾರತ್‌, ವಾಲಿಬಾಲ್‌, ವುಶು, ಯಾಚಿಂಗ್‌, ಕಯಾಕಿಂಗ್‌ ಮತ್ತು ಕನೋಯಿಂಗ್‌, ಕಬಡ್ಡಿ ಹಾಗೂ ಅಖಿಲ ಭಾರತ ವಿಶ್ವವಿದ್ಯಾಲಯ (ಎಐಯು) ಫೆಡರೇಷನ್‌ಗಳ ಪ್ರತಿ ಇಬ್ಬರು ಪ್ರತಿನಿಧಿಗಳ ಜೊತೆ ಆದ್ಯತೆಯ ಮೇರೆಗೆ ಚರ್ಚಿಸಿದರು. ‘ಕೊರೊನಾ ಬಿಕ್ಕಟ್ಟು ಬಗೆಹರಿದ ಬಳಿಕ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸುವುದು ಹಾಗೂ ಟೋಕಿಯೊ ಒಲಿಂಪಿಕ್ಸ್‌ ಹಾಗೂ 2024 ಮತ್ತು 2028ರ ಒಲಿಂಪಿಕ್ಸ್‌ಗಳನ್ನು ಗಮದಲ್ಲಿಟ್ಟುಕೊಂಡು ಯಾವೆಲ್ಲ ಕಾರ್ಯಯೋಜನೆಗಳನ್ನು ರೂಪಿಸಿದ್ದೀರಿ ಎಂಬ ಬಗ್ಗೆ ಮಾಹಿತಿ ಪಡೆದರು. ಮುಂದಿನ ಏಷ್ಯನ್‌ ಕ್ರೀಡಾಕೂಟದಲ್ಲಿ ನಿಮ್ಮ ಕ್ರೀಡಾಪಟುಗಳಿಂದ ಏನು ನಿರೀಕ್ಷೆ ಇಟ್ಟುಕೊಂಡಿದ್ದೀರಿ ಎಂಬುದರ ಕುರಿತೂ ಕೇಳಿದರು. ಕೋಚ್‌ಗಳಿಗೆ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿ ಹಾಗೂ ಶ್ರೇಷ್ಠತಾ ಕೇಂದ್ರಗಳನ್ನು ಆರಂಭಿಸುವತ್ತಲೂ ಚಿತ್ತ ಹರಿಸುವಂತೆ ಸೂಚಿಸಿದರು’ ಎಂದು ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದ ಫೆಡರೇಷನ್‌ವೊಂದರ ಅಧಿಕಾರಿ ಹೇಳಿದ್ದಾರೆ. ‘ಇದು ಔಪಚಾರಿಕ ಸಭೆ. ಹೋದ ವಾರ ಕೆಲ ಫೆಡರೇಷನ್‌ಗಳ ಜೊತೆ ಚರ್ಚಿಸಲಾಗಿತ್ತು. ಅದರಂತೆ ಈ ಬಾರಿ 11 ಫೆಡರೇಷನ್‌ಗಳ ಜೊತೆ ಮಾತಕತೆ ನಡೆಸಲಾಯಿತು. ಉಳಿದ ಫೆಡರೇಷನ್‌ಗಳ ಜೊತೆ ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ನಡೆಸಲಾಗುತ್ತದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.