ರಷ್ಯಾ ಬಾಕ್ಸಿಂಗ್ ಕೋಚ್‌ಗೆ ಕೋವಿಡ್ ಮಾಸ್ಕೊ: ರಷ್ಯಾದ ರಾಷ್ಟ್ರೀಯ ಬಾಕ್ಸಿಂಗ್ ತಂಡದ ಕೋಚ್‌ ಆ್ಯಂಟನ್ ಕಡುಶಿನ್‌ಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ.ಲಂಡನ್‌ನಲ್ಲಿ ಕಳೆದ ತಿಂಗಳು ನಡೆದಿದ್ದ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಪಾಲ್ಗೊಂಡ ತಂಡದೊಂದಿಗೆ ಅವರು ತೆರಳಿದ್ದರು. ಮಿಡಲ್‌ವೇಟ್ ವಿಭಾಗದಲ್ಲಿ 2019ರ ವಿಶ್ವ ಚಾಂಪಿಯನ್ ಆಗಿದ್ದ ಗ್ಲೆಬ್ ಬಕ್ಷಿಗೆ ತರಬೇತಿ ನೀಡುತ್ತಿರುವ ಕಡುಶಿನ್ ತಮಗೆ ಕೋವಿಡ್ ಇರುವುದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ‘ಲಂಡನ್‌ನಿಂದ ಮರಳಿದ ನಂತರ ಮಾರ್ಚ್ 25ರಂದು ವಿಪರೀತ ಜ್ವರ ಕಾಡಿತ್ತು. ಪರೀಕ್ಷೆ ಮಾಡಿಸಿದಾಗ ಕೋವಿಡ್ ಇರುವುದು ಗೊತ್ತಾಗಿದೆ. ಈಗ ಮನೆಯಲ್ಲೇ ಇದ್ದು ಸ್ವಯಂ ಐಸೊಲೇಷನ್‌ಗೆ ಒಳಗಾಗಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ. ‘ಕಡುಶಿನ್ ಅವರಿಗೆ ಸಣ್ಣ ಪ್ರಮಾಣದಲ್ಲಿ ಸೋಂಕು ಆಗಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೋಚ್ ಬಿಟ್ಟರೆ ಲಂಡನ್‌ನಿಂದ ಮರಳಿದ ಬಾಕ್ಸರ್‌ಗಳ ಪೈಕಿ ಯಾರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ’ ಎಂದು ರಷ್ಯಾ ಬಾಕ್ಸಿಂಗ್ ಫೆಡರೇಷನ್‌ ಮುಖ್ಯಸ್ಥ ಉಮರ್ ಕ್ರೆಮ್ಲೆವ್ ತಿಳಿಸಿದ್ದಾರೆ. ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಿದ್ದ ಕಾರಣ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳನ್ನು ಮಾರ್ಚ್ 16ರಂದು ದಿಢೀರ್ ಆಗಿ ರದ್ದುಗೊಳಿಸಲಾಗಿತ್ತು. ಲಂಡನ್‌ನಿಂದ ಮರಳಿದ ಕ್ರೊವೇಷ್ಯಾದ ಮೂವರು ಬಾಕ್ಸರ್‌ಗಳು ಮತ್ತು ಟರ್ಕಿಯ ಇಬ್ಬರು ಬಾಕ್ಸರ್‌ಗಳು ಹಾಗೂ ಕೋಚ್‌ಗೆ ಕೋವಿಡ್ ಇರುವುದು ದೃಢಪಟ್ಟಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.