ಆದಾಯದ ಶೇ 60 ಭಾಗ ನೀಡಿದ ಯುವ ಕ್ರೀಡಾಪಟು ನವದೆಹಲಿ: ಕೊರೊನಾ ಸೋಂಕು ತಡೆಯಲು ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿಕೊಂಡಿರುವ ಮನವಿಗೆ ಅಂತರರಾಷ್ಟ್ರೀಯ ಮಟ್ಟದ ಯುವ ಕ್ರೀಡಾಪಟು ಶಿವಂ ಠಾಕೂರ್‌ ಸ್ಪಂದಿಸಿದ್ದಾರೆ. ಉತ್ತರ ಪ್ರದೇಶದ ಗ್ರೇಟರ್‌ ನೊಯ್ಡಾ ನಿವಾಸಿಯಾಗಿರುವ, 18ರ ಪ್ರಾಯದ ಉದಯೋನ್ಮುಖ ಆಟಗಾರ ಶಿವಂ, ಮುಂದಿನ ಮೂರು ವರ್ಷಗಳ ಅವಧಿಯ ತಮ್ಮ ಆದಾಯದ ಶೇ 60ರಷ್ಟು ಭಾಗವನ್ನು ದೇಣಿಗೆ ನೀಡುವುದಾಗಿ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಪಂದ್ಯಗಳ ಸಂಭಾವನೆಯ ಮೂಲಕ ಸದ್ಯ ವಾರ್ಷಿಕ ₹ 5 ಲಕ್ಷ ಆದಾಯ ಹೊಂದಿರುವ ಇವರು, ವಾರ್ಷಿಕ ₹ 3 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ಮಲೇಷ್ಯದಲ್ಲಿ ನಡೆದಿದ್ದ ವಿಶ್ವ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಹಾಗೂ ರಜತ ಪದಕ ಗಳಿಸಿರುವ ಶಿವಂ, ದುಬೈನಲ್ಲಿ ಮುಂದಿನ ಜುಲೈ ವೇಳೆ ನಿಗದಿಯಾಗಿರುವ ಏಷ್ಯನ್‌ ಕ್ರೀಡಾಕೂಟಕ್ಕೂ ಆಯ್ಕೆಯಾಗಿದ್ದಾರೆ. ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ 4 ಚಿನ್ನ ಮತ್ತು 1 ಬೆಳ್ಳಿ ಪದಕ ಗೆದ್ದಿರುವ ಶಿವಂ, ಶಾಲಾ ಕ್ರೀಡಾ ಚಟುವಟಿಕೆ ಅಭಿವೃದ್ಧಿ ಪ್ರತಿಷ್ಠಾನ (ಎಸ್‌ಜಿಎಡಿಎಫ್‌) ಸೇರಿದಂತೆ ಹಲವು ಕ್ರೀಡಾ ಸಂಸ್ಥೆಗಳ ಬ್ರಾಂಡ್ ಅಂಬಾಸಿಡರ್ ಸಹ ಆಗಿದ್ದಾರೆ. ‘ಕ್ರಿಕೆಟಿಗನಾಗಬೇಕು ಎಂಬ ಕನಸು ಕಂಡಿದ್ದೆ. 4 ವರ್ಷಗಳ ಹಿಂದೆ ಕೇರಳದಲ್ಲಿ ನಡೆದಿದ್ದ ಅಂತರರಾಜ್ಯ ಮಟ್ಟದ ಕ್ರಿಕೆಟ್‌ ಪಂದ್ಯದಲ್ಲಿ ಬಿದ್ದು ಗಾಯಗೊಂಡ ಪೆರಿಣಾಮ ನನ್ನ ಕ್ರೀಡಾ ಭವಿಷ್ಯವೇ ಮಸುಕಾಗಿತ್ತು. ಆದರೂ ವಿಚಲಿತನಾಗದೇ ಶೂಟಿಂಗ್‌ನತ್ತ ಆಸಕ್ತಿ ತಾಳಿ ಕಠಿಣ ಪರಿಶ್ರಮದಿಂದ ಅಂತರರಾಷ್ಟ್ರೀಯ ಮಟ್ಟ ತಲುಪಿದ್ದೇನೆ. ದೇಶದ ಜನ ನನಗೆ ಪ್ರೋತ್ಸಾಹ, ಗೌರವ, ನೆರವು ನೀಡಿದ್ದಾರೆ. ನಾನೂ ಅವರಿಗೆ ಸಹಾಯ ಮಾಡಬೇಕು ಎಂದೇ ಶೇ 60ರಷ್ಟು ಆದಾಯವನ್ನು ಸರ್ಕಾರಕ್ಕೆ ನೀಡಲು ನಿರ್ಧರಿಸಿದೆ’ ಎಂದು ಶಿವಂ ‘ಪ್ರಜಾವಾಣಿ’ಗೆ ತಿಳಿಸಿದರು. ಬಿಹಾರ ಮೂಲದ ಶಿವಂ ಅವರ ತಂದೆ ಅರುಣಕುಮಾರ್‌ ಅವರು ಗ್ರೇಟರ್ ನೋಯ್ಡಾದ ಕುಲೆಸ್ರಾ ಗ್ರಾಮದಲ್ಲಿ ಚಿಕ್ಕ ಕಿರಾಣಿ ಅಂಗಡಿ ನಡೆಸುತ್ತ ಜೀವನ ನಿರ್ವಹಿಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.