ಶೂಟಿಂಗ್‌: ಅನಧಿಕೃತ ಆನ್‌ಲೈನ್‌ ಲೀಗ್‌ಗಳಿಂದ ದೂರವಿರಿ ನವದೆಹಲಿ: ಅನಧಿಕೃತ ಆನ್‌ಲೈನ್‌ ಲೀಗ್‌ಗಳಿಂದ ದೂರವಿರುವಂತೆ ಭಾರತ ರಾಷ್ಟ್ರೀಯ ರೈಫಲ್‌ ಅಸೋಸಿಯೇಷನ್‌ (ಎನ್‌ಆರ್‌ಎಐ) ದೇಶದ ಶೂಟರ್‌ಗಳಿಗೆ ಸೂಚಿಸಿದೆ. ಒಂದೊಮ್ಮೆ ಅಂತಹ ಟೂರ್ನಿಗಳಲ್ಲಿ ಪಾಲ್ಗೊಂಡರೆ ಶಿಸ್ತು ಕ್ರಮ ಎದುರಿಸಬೇಕಾದೀತು ಎಂದೂ ಎಚ್ಚರಿಸಿದೆ. ತಾನು ಅಂತಹ ಯಾವುದೇ ಟೂರ್ನಿಗಳಿಗೆ ಅನುಮತಿ ನೀಡಿಲ್ಲ ಎಂದು ಎನ್‌ಆರ್‌ಎಐ ಸ್ಪಷ್ಟಪಡಿಸಿದೆ. ‘ಅಸೋಸಿಯೇಷನ್‌ನ ಅನುಮತಿಯಿಲ್ಲದೆ ಅನಧಿಕೃತ ಆನ್‌ಲೈನ್‌ ಲೀಗ್‌ಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ಯಾವುದೇ ಲೀಗ್‌ ಪಂದ್ಯಗಳಲ್ಲಿ ಭಾಗವಹಿಸುವುದು ಅಥವಾ ಸಹಕಾರ ನೀಡುವುದನ್ನು ಮಾಡುವಂತಿಲ್ಲ ಎಂದು ಶೂಟರ್‌ಗಳಿಗೆ ಸೂಚಿಸಲಾಗಿದೆ’ ಎಂದು ಎನ್‌ಆರ್‌ಎಐ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ದೇಶದ ಶೂಟರ್‌ಗಳಿಗಾಗಿ ಭಾರತದ ಹಿರಿಯ ಶೂಟರ್‌ ಶಿಮೊನ್‌ ಶರೀಫ್‌ ಅವರು ಇತ್ತೀಚೆಗೆ ಅಂತರರಾಷ್ಟ್ರೀಯ ಲೀಗ್‌ ನಡೆಸಿದ್ದರು. ಎನ್‌ಆರ್‌ಎಐನ ಹೇಳಿಕೆಗೆ ಸಂಬಂಧಿಸಿದ ಅನಧಿಕೃತ ಲೀಗ್‌ ಇದೇ ಎಂದು ಹೇಳಲಾಗುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.