ಜಪಾನ್‌ನಲ್ಲಿ ಫುಟ್‌ಬಾಲ್ ಮತ್ತು ಬೇಸ್‌ಬಾಲ್ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಟೋಜಿಯೊ: ಕೊರೊನಾ ವೈರಾಣು ಕಾಟದಿಂದ ಉಂಟಾಗಿರುವ ವಿಷಮ ಸ್ಥಿತಿಯಿಂದಾಗಿ ಕ್ರೀಡಾಂಗಣಗಳಿಂದ ದೂರ ಉಳಿದಿರುವ ಜಪಾನ್‌ನ ಫುಟ್‌ಬಾಲ್ ಮತ್ತು ಬೇಸ್‌ಬಾಲ್ ಅಭಿಮಾನಿಗಳ ಪಾಲಿಗೆ ಸಂತಸದ ಸುದ್ದಿ ಬಂದಿದೆ. ಜುಲೈ 10ರಿಂದ ಜೆ–ಲೀಗ್‌ ಫುಟ್‌ಬಾಲ್ ಮತ್ತು ‘ಪ್ರೊಫೆಷನಲ್ ಬೇಸ್‌ಬಾಲ್ ಲೀಗ್’ ವೀಕ್ಷಣೆಗೆ ಪ್ರೇಕ್ಷಕರನ್ನು ಕ್ರೀಡಾಂಗಣದೊಳಗೆ ಬಿಡಲು ನಿರ್ಧರಿಸಲಾಗಿದೆ. ದೇಶದಲ್ಲಿ ಕ್ರೀಡಾಕ್ಷೇತ್ರ ಸಹಜ ಸ್ಥಿತಿಯತ್ತ ಮರಳುತ್ತಿದ್ದು ವೃತ್ತಿಪರ ಬೇಸ್‌ಬಾಲ್‌ ಟೂರ್ನಿಯಾದ ನಿಪಾನ್ ಮತ್ತು ಜೆ–ಲೀಗ್‌ ಫುಟ್‌ಬಾಲ್ ಟೂರ್ನಿಯ ಆಯೋಜಕರು ವೈರಾಣು ಸೋಂಕು ತಜ್ಞರ ಜೊತೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ. ‘ಸದ್ಯದ ಪರಿಸ್ಥಿತಿಯ ಸೂಕ್ಷ್ಮ ಅವಲೋಕನ ನಡೆಸಲಾಗಿದೆ. ಮುಂದಿನ ತಿಂಗಳ ಹತ್ತರ ನಂತರ ಪ್ರೇಕ್ಷಕರನ್ನು ಕ್ರೀಡಾಂಗಣದ ಒಳಗೆ ಬಿಡಬಹುದು ಎಂದುಸರ್ಕಾರದ ಅಧಿಕಾರಿಗಳೇ ಹೇಳಿದ್ದಾರೆ’ ಎಂದು ಬೇಸ್‌ಬಾಲ್ ಆಯುಕ್ತ ಅತ್ಸುಶಿ ಸಾಯ್ತೊ ಮತ್ತು ಜೆ–ಲೀಗ್ ಆಡಳಿತ ಸಮಿತಿ ಮುಖ್ಯಸ್ಥ ಮಿತ್ಸುರಾ ಮುರಾಯ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ. ‘ಕ್ರೀಡಾಂಗಣದ ಸಾಮರ್ಥ್ಯದ ಶೇಕಡಾ 50 ಮಂದಿಯನ್ನು ಅಥವಾ ಐದು ಸಾವಿರ ಪ್ರೇಕ್ಷಕರನ್ನು ಒಳಗೆ ಬಿಡಲಾಗುವುದು. ಮಾಸ್ಕ್ ಧರಿಸಿಕೊಂಡು ಒಳಗೆ ಬರಬೇಕು. ಕೈಗಳನ್ನು ಆಗಾಗ ತೊಳೆಯುತ್ತಿರಬೇಕು, ಸಂಭ್ರಮದಿಂದ ಚೀರಾಡುವಂತಿಲ್ಲ ಎಂದು ಪ್ರೇಕ್ಷಕರಿಗೆ ಸೂಚಿಸಲಾಗುವುದು’ ಎಂದು ಅವರು ತಿಳಿಸಿದರು. ಜಪಾನ್‌ನ ಪ್ರಮುಖ ಟೂರ್ನಿಯಾದ ಪ್ರೊಫೆಷನಲ್ ಬೇಸ್‌ಬಾಲ್ ಕಳೆದ ವಾರಾಂತ್ಯದಲ್ಲಿ ಆರಂಭಗೊಂಡಿದೆ. ಆದರೆ ಪ್ರೇಕ್ಷಕರಿಲ್ಲದ ಅಂಗಣದಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ರಾಷ್ಟ್ರದ ಅಗ್ರ ಡಿವಿಷನ್‌ ಫುಟ್‌ಬಾಲ್ ಟೂರ್ನಿಯಾದ ಜೆ–ಲೀಗ್‌ ಜುಲೈ ನಾಲ್ಕರಂದು ಆರಂಭಗೊಳ್ಳಲಿದೆ. ಆರಂಭದ ಕೆಲವು ದಿನಗಳ ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಕೊರೊನಾ ಕಾಟದಿಂದಾಗಿ ಟೋಕಿಯೊ ಒಲಿಂಪಿಕ್ಸ್‌ ಕೂಟವನ್ನು ಒಂದು ವರ್ಷ ಮುಂದೂಡಲಾಗಿದೆ. ಮುಂದಿನ ವರ್ಷವೂ ಒಲಿಂಪಿಕ್ಸ್ ನಡೆಸುವುದರ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಆಗಲಿಲ್ಲ. ಈ ನಡುವೆ ರಾಷ್ಟ್ರದಾದ್ಯಂತ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಕಳೆದ ತಿಂಗಳ ಅಂತ್ಯದಲ್ಲಿ ಜಪಾನ್ ಸರ್ಕಾರ ವಾಪಸ್ ತೆಗೆದುಕೊಂಡಿದ್ದು ಕ್ರೀಡಾಂಗಣಗಳಿಗೆ ಪ್ರೇಕ್ಷಕರನ್ನು ಹಂತಹಂತವಾಗಿ ಬಿಡಲಾಗುವುದು ಎಂದು ತಿಳಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.