ಜುಲೈ 4ರಿಂದ ಆನ್‌ಲೈನ್‌ ಶೂಟಿಂಗ್‌ ಲೀಗ್‌ ನವದೆಹಲಿ: ವಿಶ್ವದ ಪ್ರಥಮ ಆನ್‌ಲೈನ್‌ ಶೂಟಿಂಗ್‌ ಲೀಗ್‌ಗೆ ಜುಲೈ 4ರಂದು ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿಆಸ್ಟ್ರಿಯನ್‌ ರಾಕ್ಸ್‌ ಮತ್ತು ಇಟಾಲಿಯನ್‌ ಸ್ಟೈಲ್‌ ತಂಡಗಳು ಸೆಣಸಲಿವೆ. ಲೀಗ್‌ನಲ್ಲಿ ಭಾರತದ ‘ಇಂಡಿಯನ್‌ ಟೈಗರ್ಸ್‌’ ತಂಡವೂ ಪಾಲ್ಗೊಳ್ಳುತ್ತಿದೆ. ಜುಲೈ 5ರಂದು ನಡೆಯುವ ಹೋರಾಟದಲ್ಲಿ ಟೈಗರ್ಸ್‌ ತಂಡವು ಇಟಾಲಿಯನ್‌ ಸ್ಟೈಲ್ ಸವಾಲು ಎದುರಿಸಲಿದೆ. ಜುಲೈ 11ರ ಹಣಾಹಣಿಯಲ್ಲಿ ಟೈಗರ್ಸ್‌ ತಂಡ ಆಸ್ಟ್ರಿಯನ್‌ ರಾಕ್ಸ್‌ ಎದುರು ಆಡಲಿದೆ. ಫ್ರೆಂಚ್‌ ಫ್ರಾಗ್ಸ್‌ ಮತ್ತು ಇಸ್ರೇಲ್‌ ಮಾಬರೋಟ್‌ ಹಾಗೂ ಸ್ಪ್ಯಾನಿಷ್‌ ಚಾನೊಸ್‌ ಮತ್ತು ಫ್ರೆಂಚ್‌ ಫ್ರಾಗ್ಸ್‌ ನಡುವಣ ಪಂದ್ಯಗಳು ಕ್ರಮವಾಗಿ ಜುಲೈ 10 ಮತ್ತು 12ರಂದು ನಿಗದಿಯಾಗಿವೆ. ಜುಲೈ 18 ಮತ್ತು 19ರಂದು ಸೆಮಿಫೈನಲ್‌ ಪಂದ್ಯಗಳು ಆಯೋಜನೆಯಾಗಿವೆ. ಮೂರನೇ ಸ್ಥಾನದ ಪಂದ್ಯವು 25ರಂದು ಹಾಗೂ ಫೈನಲ್‌ ಹೋರಾಟವು 26ರಂದು ನಿಗದಿಯಾಗಿವೆ. ಲೀಗ್‌ನಲ್ಲಿ ಭಾಗವಹಿಸುವ ಪ್ರತಿ ತಂಡದಲ್ಲೂ ಕೋಚ್‌ ಹಾಗೂಮೂವರು ರೈಫಲ್‌ ಶೂಟರ್‌ಗಳು ಇರಲಿದ್ದಾರೆ. ‘ರೇಸ್‌ ಟು ಟೆನ್‌’ ಮಾದರಿಯಲ್ಲಿ ಪಂದ್ಯಗಳು ನಡೆಯುತ್ತವೆ. ‘ಶೂಟರ್‌ಗಳು ತಾವು ಇರುವ ಸ್ಥಳದಿಂದಲೇ (ಝೂಮ್‌ ಆ್ಯಪ್ ಮೂಲಕ‌) ಲೀಗ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಒಂದು ತಿಂಗಳ ಅವಧಿಯಲ್ಲಿ ಒಟ್ಟು 10 ಪಂದ್ಯಗಳು ನಡೆಯುತ್ತವೆ. @ ಫೇಸ್‌ಬುಕ್‌ ಪುಟದಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು’ ಎಂದು ಲೀಗ್‌ನ ಆಯೋಜಕ ಶಿಮನ್‌ ಶರೀಫ್‌ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.