ಉದ್ದೀಪನ ಮದ್ದು ಪ್ರಯೋಗಾಲಯದ ಮೇಲಿನ ಅಮಾನತು ವಿಸ್ತರಣೆ ನವದೆಹಲಿ: ಮುಂದಿನ ವರ್ಷಕ್ಕೆ ಮುಂದೂಡಲಾಗಿರುವ ಒಲಿಂಪಿಕ್ಸ್‌ ಕೂಟಕ್ಕೆ ಸಜ್ಜಾಗುತ್ತಿರುವ ಭಾರತಕ್ಕೆ ಅಂತರರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಬುಧವಾರ ಭಾರಿ ಪೆಟ್ಟು ನೀಡಿದೆ. ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷೆ ಪ್ರಯೋಗಾಲದ (ಎನ್‌ಡಿಟಿಎಲ್) ಮೇಲೆ ಹೇರಲಾಗಿದ್ದ ಅಮಾನತನ್ನು ಅದು ಆರು ತಿಂಗಳು ವಿಸ್ತರಿಸಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿಲ್ಲ ಎಂಬ ಕಾರಣ ನೀಡಿ ಕಳೆದ ವರ್ಷದ ಆಗಸ್ಟ್‌ ತಿಂಗಳಲ್ಲಿ ಪ್ರಯೋಗಾಲಯವನ್ನು ಆರು ತಿಂಗಳ ಕಾಲ ಅಮಾನತು ಮಾಡಲಾಗಿತ್ತು. ಫೆಬ್ರುವರಿಯಲ್ಲಿ ವಾಡಾದ ಸ್ವತಂತ್ರ ಶಿಸ್ತು ಸಮಿತಿ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆದರೆ ಇನ್ನೂ ಕೂಡ ಗುಣಮಟ್ಟ ಕಾಪಾಡಲು ಸಾಧ್ಯವಾಗಲಿಲ್ಲ ಎಂದು ವರದಿ ನೀಡಿತ್ತು. ಹೀಗಾಗಿ ಮುಂದಿನ ವರ್ಷದ ಜನವರಿ ವರೆಗೆ ಅಮಾನತು ಮುಂದುವರಿಸಲು ನಿರ್ಧರಿಸಲಾಗಿದೆ. ‘ನವದೆಹಲಿಯಲ್ಲಿರುವ ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷೆ ಪ್ರಯೋಗಾಲಯದ ಮೇಲೆ ಹೇರಿರುವ ಅಮಾನತನ್ನು ಮತ್ತೆ ಆರು ತಿಂಗಳ ಕಾಲ ಮುಂದುವರಿಸಲಾಗಿದೆ. ಹೀಗಾಗಿ ಮೂತ್ರ ಮತ್ತು ರಕ್ತದ ಮಾದರಿ ಸಂಗ್ರಹಿಸುವುದು ಒಳಗೊಂಡಂತೆ ಉದ್ದೀಪನ ಮದ್ದು ಸೇವನೆ ತಡೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಯನ್ನು ಭಾರತದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಡೆಸುವಂತಿಲ್ಲ‘ ಎಂದು ಪ್ರಕಟಣೆಯಲ್ಲಿ ವಾಡಾ ತಿಳಿಸಿದೆ. ವಾಡಾ ನಿರ್ಧಾರಕ್ಕೆ ಸಂಬಂಧಿಸಿ ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ’ನಾನು ಪ್ರಯೋಗಾಲಯದ ಅಧ್ಯಕ್ಷ ಸ್ಥಾನಕ್ಕೆ ಏರುವ ಮೊದಲು ಈ ಹಿಂದಿನ ಅಮಾನತು ಜಾರಿಗೆ ಬಂದಿತ್ತು. ವಿಷಯ ತಿಳಿದ ನಂತರ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಆದ್ದರಿಂದ ಪ್ರಯೋಗಾಲಯದ ಮಾನ್ಯತೆ ರದ್ದು ಮಾಡುವಂಥ ಕಠಿಣ ಕ್ರಮಕ್ಕೆ ವಾಡಾ ಮುಂದಾಗಲಿಲ್ಲ ಎಂಬುದು ಸಮಾಧಾನದ ವಿಷಯ‘ ಎಂದರು. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಈಗಾಗಲೇ ಸಂಗ್ರಹಿಸಿರುವ ಮಾದರಿಗಳನ್ನು ದೋಹಾದಲ್ಲಿರುವ ವಾಡಾದ ಮಾನ್ಯತೆ ಪಡೆದಿರುವ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಾ ವರದಿಗಳನ್ನು ತರಿಸಲಾಗುತ್ತಿದೆ. ‘ವಾಡಾ ನಿಯಮದ 13.7ನೇ ವಿಧಿಯ ಪ್ರಕಾರ ಎನ್‌ಡಿಟಿಎಲ್‌ಗೆ ಈ ತೀರ್ಪಿನ ವಿರುದ್ಧ ಕ್ರೀಡಾ ನ್ಯಾಯಾಲಯದಲ್ಲಿಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ನೋಟಿಸ್ ಲಭಿಸಿದ 21 ದಿನಗಳ ಒಳಗೆ ಮನವಿ ಸಲ್ಲಿಸಬೇಕು. ಮುಂದಿನ ಆರು ತಿಂಗಳಲ್ಲೂ ಎನ್‌ಡಿಟಿಎಲ್‌ನ ಕೊರತೆಗಳನ್ನು ನೀಗಿಸಿಕೊಳ್ಳದಿದ್ದರೆ ಮತ್ತೆ ಆರು ತಿಂಗಳ ಕಾಲ ಅಮಾನತು ಮಾಡುವ ಸಾಧ್ಯತೆ ಇದೆ‘ ಎಂದು ನಾಡಾ ಮಹಾನಿರ್ದೇಶಕ ನವೀನ್ ಅಗರವಾಲ್ ತಿಳಿಸಿದರು. ‘ಅಮಾನತು ಮುಗಿಯುವ ವರೆಗೆ ಮಾದರಿಗಳ ಪರೀಕ್ಷೆಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಗಾಗಿದೆ. ವಿದೇಶದ ಪ್ರಯೋಗಾಲಯಗಳಲ್ಲಿ ಮಾದರಿಗಳ ಪರೀಕ್ಷೆ ಮಾಡುವುದಕ್ಕೆ ಭಾರಿ ಮೊತ್ತ ವ್ಯಯವಾಗುತ್ತದೆ‘ ಎಂದು ಅವರು ವಿವರಿಸಿದರು. ’ವಾಡಾದ ಈ ನಿರ್ಧಾರ ಕ್ರೀಡಾ ಸಚಿವಾಲಯಕ್ಕೂ ಎನ್‌ಡಿಟಿಎಲ್‌ಗೂ ದೊಡ್ಡ ಪೆಟ್ಟು ನೀಡಿದೆ. ಕ್ರೀಡಾ ಇಲಾಖೆಯ ಯಾರಾದರೂ ಇದರ ಹೊಣೆ ಹೊರಲು ತಯಾರಾಗಬೇಕು. ನಾಡಾಗೆ ಕೆಲವು ತಿಂಗಳಿಂದ ಮಾನ್ಯತೆ ಇರುವ ಪ್ರಯೋಗಾಲಯವೊಂದು ಇಲ್ಲ. ಈಗ ಮತ್ತೆ ಆರು ತಿಂಗಳು ಅಮಾನತಿಗೆ ಒಳಗಾಗಿರುವುದು ಇನ್ನಷ್ಟು ತೊಂದರೆಗೆ ಈಡು ಮಾಡಿದೆ’ ಎಂದು ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹಾಜರಾಗುತ್ತಿರುವ ವಕೀಲ್ ಪಾರ್ಥ ಗೋಸ್ವಾಮಿ ಅಭಿಪ್ರಾಯಪಟ್ಟರು. ‘ಕತಾರ್‌ಗೆ ಮಾದರಿಗಳನ್ನು ಕಳುಹಿಸುವುದು ಆರ್ಥಿಕ ನಷ್ಟಕ್ಕೂ ಪರೀಕ್ಷಾ ವರದಿ ತಡವಾಗುವುದಕ್ಕೂ ಕಾರಣವಾಗುತ್ತಿದೆ. ಈ ಬಾರಿ ಎನ್‌ಡಿಟಿಎಲ್ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ’ ಎಂದು ಗೋಸ್ವಾಮಿ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.