ಜಪಾನ್‌ನಲ್ಲಿ ಸುಮೊ ಕುಸ್ತಿ ಕಲರವ ಟೋಕಿಯೊ: ಮುಖಗವಸು ಧರಿಸಿಕೊಂಡು, ಅಂತರ ಕಾಯ್ದುಕೊಂಡ ಅಭಿಮಾನಿಗಳು ಭಾನುವಾರ ಜಪಾನ್‌ನಲ್ಲಿ ಆರಂಭವಾದ ಸುಮೊ ಕುಸ್ತಿ ಪಂದ್ಯಾವಳಿಗೆ ಸಾಕ್ಷಿಯಾದರು. ಕೋವಿಡ್‌ ಬಿಕ್ಕಟ್ಟಿನಿಂದ ಸ್ಥಗಿತಗೊಂಡಿದ್ದ ಟೂರ್ನಿಗಳು ಐದು ತಿಂಗಳ ಬಳಿಕ ಇಲ್ಲಿ ಪುನರಾರಂಭವಾದವು. ಮೇ ತಿಂಗಳಲ್ಲಿ ನಿಗದಿಯಾಗಿದ್ದ ಟೂರ್ನಿಯೊಂದು ಕೊರೊನಾ ಹಾವಳಿಯ ಕಾರಣ ರದ್ದಾಗಿತ್ತು. ಮಾರ್ಚ್‌ನಲ್ಲಿ ನಡೆದ ಸ್ಪ್ರಿಂಗ್‌ ಗ್ರ್ಯಾಂಡ್‌ ಟೂರ್ನಿಗೆ ಪ್ರೇಕ್ಷಕರಿಗೆ ನಿರ್ಬಂಧವಿತ್ತು. ಈ ತಿಂಗಳ ಆರಂಭದಲ್ಲಿ ಗೊತ್ತು ಮಾಡಲಾಗಿದ್ದ ಟೂರ್ನಿಯು ಎರಡು ವಾರಗಳ ಬಳಿಕ ಶುರುವಾಗಿದೆ. ಈ ಮೊದಲು ಕೇಂದ್ರ ಜಪಾನ್‌ನ ನಾಗೋಯಾದಲ್ಲಿ ನಡೆಯಬೇಕಿದ್ದ ಟೂರ್ನಿಯನ್ನು ರಾಜಧಾನಿ ಟೋಕಿಯೊಗೆ ಸ್ಥಳಾಂತರಿಸಲಾಗಿದೆ. 11,000 ಆಸನ ಸಾಮರ್ಥ್ಯದ ರ‍್ಯೊಗೊಕು ಕೋಕುಗಿಕಾನ್‌ ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಗೆ ಜಪಾನ್‌ ಸುಮೊ ಸಂಸ್ಥೆಯು (ಜೆಎಸ್‌ಡಬ್ಲ್ಯು) ದಿನವೊಂದಕ್ಕೆ 2,500 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿದೆ. ಟೂರ್ನಿಯು ಎರಡು ವಾರಗಳ ಕಾಲ ನಡೆಯಲಿದೆ. ಸುಮೊ ಕುಸ್ತಿ ಪಟುಗಳು ಮನೆಯಿಂದ ಅನಗತ್ಯವಾಗಿ ಹೊರಹೋಗುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಮನೆಯಲ್ಲಿದ್ದು ತರಬೇತಿ ನಡೆಸಲು ಹೇಳಲಾಗಿದೆ. ಭಾನುವಾರ ನಡೆದ ಹಣಾಹಣಿಯಲ್ಲಿ ಗ್ರ್ಯಾಂಡ್‌ ಚಾಂಪಿಯನ್‌ ಹಕುಹೊ ಗೆಲುವಿನ ಖಾತೆ ತೆರೆದರು. ಟೂರ್ನಿಯ ವೇಳೆ ಪ್ರೇಕ್ಷಕರು ಅಂತರ ಪಾಲಿಸಬೇಕಿದ್ದು, ನಾಲ್ವರು ಕೂರಬೇಕಾದ ಆಸನದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.