ಜವಾನ ಸ್ಥಾನಕ್ಕೆ ಅಂಗವಿಕಲ ಕ್ರಿಕೆಟಿಗ ಅರ್ಜಿ ನವದೆಹಲಿ: ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ಭಾರತ ಅಂಗವಿಕಲ ಕ್ರಿಕೆಟ್ ತಂಡದ ಮಾಜಿ ನಾಯಕ ದಿನೇಶ್ ಸೇನ್, ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದಲ್ಲಿ ಜವಾನ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ದಿನೇಶ್ ಜನ್ಮದಿಂದಲೇ ಪೊಲೀಯೊದಿಂದಾಗಿ ಅಂಗವಿಕರಾಗಿದ್ದಾರೆ. ಆದರೆ ಬಾಲ್ಯದಿಂದಲೂ ಕ್ರಿಕೆಟ್‌ನಲ್ಲಿ ತಮ್ಮ ಪ್ರತಿಭೆ ಮೆರೆದರು. 2015 ರಿಂದ 2019ರ ಅವಧಿಯಲ್ಲಿ ಭಾರತ ಅಂಗವಿಕಲರ ತಂಡದ ನಾಯಕತ್ವ ವಹಿಸಿದ್ದರು. ಆದರೆ ಈಗ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಅವರು ಕುಟುಂಬದ ನಿರ್ವಹಣೆಗಾಗಿ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ’ಈಗ ನನಗೆ 35 ವರ್ಷ ವಯಸ್ಸು. 12ನೇ ತರಗತಿಯ ನಂತರ ಬರೀ ಕ್ರಿಕೆಟ್ ಆಡುವುದನ್ನು ಬಿಟ್ಟು ಬೇರೆ ಏನೂ ಮಾಡಲಿಲ್ಲ. ಈಗ ಪದವಿಯ ಮೊದಲ ವರ್ಷಕ್ಕೆ ನೋಂದಣಿ ಮಾಡಿಕೊಂಡಿದ್ದೇನೆ. ಆದರೆ ನನ್ನ ಬಳಿ ಹಣವಿಲ್ಲ. ನಾಡಾದಲ್ಲಿ ಜವಾನ ಸ್ಥಾನ ಖಾಲಿ ಇರುವುದಾಗಿ ಗೊತ್ತಾಯಿತು. ಅರ್ಜಿ ಹಾಕಿದ್ದೇನೆ‘ ಎಂದು ಸೋನೆಪತ್‌ನಲ್ಲಿರುವ ದಿನೇಶ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಇಲ್ಲಿಯವರೆಗೆ ದಿನೇಶ್ ಕುಟುಂಬವನ್ನು ಅವರ ಅಣ್ಣಂದಿರು ನೋಡಿಕೊಂಡಿದ್ದರು. ’ಜವಾನ ಸ್ಥಾನಕ್ಕೆ 25 ವರ್ಷ ವಯೋಮಿತಿ ಇದೆ. ಅಂಗವಿಕಲ ಕೋಟಾದಲ್ಲಿ 35 ವರ್ಷದವರೆಗೂ ಅವಕಾಶ ವಿದೆ. ಸರ್ಕಾರಿ ನೌಕರಿ ಪಡೆಯಲು ಇದು ನನಗಿರುವ ಕೊನೆಯ ಅವಕಾಶ‘ ಎಂದಿದ್ದಾರೆ. ಕೆಲವು ದಿನಗಳ ಮುನ್ನ ಅವರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇದ್ದ ಜವಾನ ಕೆಲಸಕ್ಕಾಗಿ ಸಂದರ್ಶನ ನೀಡಿದ್ದರು. ’ನನ್ನ ಒಂದು ಕಾಲು ಊನವಾಗಿದೆ. ಆದರೆ ಕ್ರಿಕೆಟ್‌ ಪ್ರೀತಿಯಲ್ಲಿ ಆ ನೋವನ್ನು ಮರೆತು ಆಡಿದೆ. ಬಾಂಗ್ಲಾದಲ್ಲಿ 2015ರಲ್ಲಿ ನಡೆದ ಐದು ದೇಶಗಳ ಟೂರ್ನಿಯಲ್ಲಿ ಆಡಿದ್ದೆ. ಅದರಲ್ಲಿ ಎಂಟು ವಿಕೆಟ್ ಪಡೆದು ಶ್ರೇಷ್ಠ ಬೌಲರ್ ಆಗಿದ್ದೆ. ಅದರಲ್ಲಿ ಎರಡು ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಪಡೆದ ವಿಕೆಟ್‌ಗಳಾಗಿದ್ದವು. ಆದರೆ ಭಾರತ ತಂಡಕ್ಕೆ ಆಡಿದ ನಂತರವೂ ಆರ್ಥಿಕವಾಗಿ ಹಿಂದುಳಿದಿದ್ದೇವೆ. ಯಾವುದೇ ಸಹಾಯ ಲಭಿಸಿಲ್ಲ‘ ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ’ನಾಡಾದಲ್ಲಿ ನೌಕರಿ ಸಿಕ್ಕರೆ ಕ್ರೀಡಾ ಕ್ಷೇತ್ರ ಮತ್ತು ಕ್ರಿಕೆಟ್‌ನೊಂದಿಗಿನ ನಂಟು ಉಳಿಸಿಕೊಳ್ಳುವ ಅವಕಾಶ ಸಿಗುತ್ತದೆ. ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಅಲ್ಲದೇ ನನ್ನ ಕುಟುಂಬದ ನಿರ್ವಹಣೆಗೆ ಅನುಕೂಲವಾಗುತ್ತದೆ‘ ಎಂದು ದಿನೇಶ್ ಹೇಳುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.