ವುಷು ಪಟುವಿಗೆ ಕೇಂದ್ರದ ಆರ್ಥಿಕ ನೆರವು ನವದೆಹಲಿ: ಹರಿಯಾಣದ ವುಷು ಪಟು ಶಿಕ್ಷಾ ಅವರಿಗೆ ₹ 5 ಲಕ್ಷದ ನೆರವು ನೀಡಲು ಕೇಂದ್ರ ಕ್ರೀಡಾ ಇಲಾಖೆ ಮುಂದಾಗಿದೆ. ಕೋವಿಡ್–19ರಿಂದಾಗಿ ಆರ್ಥಿಕ ಸಮಸ್ಯೆಗೆ ಒಳಗಾಗಿರುವ ಶಿಕ್ಷಾ ಅವರು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ವಿಷಯ ಗಮನಕ್ಕೆ ಬಂದ ನಂತರ ಕ್ರೀಡಾ ಸಚಿವ ಕಿರಣ್ ರಿಜಿಜು ಈ ನಿರ್ಧಾರ ಕೈಗೊಂಡಿದ್ದಾರೆ. 22 ವರ್ಷದ ಶಿಕ್ಷಾ ರಾಜ್ಯ ವುಷು ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 22 ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಅವರಿಗೆ ಕ್ರೀಡಾಪಟುಗಳಿಗಾಗಿರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ನಿಧಿಯಿಂದ ಹಣ ನೀಡಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ‘ತಕ್ಕ ಸಮಯದಲ್ಲಿ ಸಮಸ್ಯೆಗೆ ಸ್ಪಂದಿಸಿ ಆರ್ಥಿಕ ನೆರವು ನೀಡಿರುವ ಸಚಿವರಿಗೆ ನಾನು ಚಿರ ಋಣಿ. ಅವರಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂದೇ ಗೊತ್ತಾಗುತ್ತಿಲ್ಲ’ ಎಂದು ಕ್ರೀಡಾ ವಿಜ್ಞಾನದಲ್ಲಿ ಬಿಎಸ್‌ಸಿ ಕಲಿಯುತ್ತಿರುವ ಶಿಕ್ಷಾ ಹೇಳಿದ್ದಾರೆ. 'ಆರ್ಥಿಕ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಆದ್ದರಿಂದ ಆದಷ್ಟು ಬೇಗ ತರಬೇತಿಗೆ ಹಾಜರಾಗುವೆ. ಕ್ರೀಡಾಪಟುಗಳ ವೈಯಕ್ತಿಕ ಸಮಸ್ಯೆಗಳನ್ನು ಅರಿತು ಸ್ಪಂದಿಸುವ ಇಂಥ ಸಚಿವರು ಇರುವುದು ನಮ್ಮೆಲ್ಲರ ಅದೃಷ್ಟ. ಒಂದು ವರ್ಷದೊಳಗೆ ದೇಶಕ್ಕಾಗಿ ಚಿನ್ನ ಗೆದ್ದುಕೊಟ್ಟು ನನ್ನ ಋಣವನ್ನು ತೀರಿಸುವೆ’ ಎಂದು ಅವರು ಭಾವುಕರಾಗಿ ಭರವಸೆ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.