ಎನ್‌ಎಸ್‌ಎಫ್‌ : ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಕ್ರೀಡಾಸಚಿವಾಲಯ ನಿರ್ಧಾರ ನವದೆಹಲಿ: ರಾಷ್ಟ್ರೀಯ ಫೆಡರೇಷನ್‌ಗಳಿಗೆ ಮಾನ್ಯತೆ ನೀಡುವ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದರ ಮೇಲೆ ನಿರ್ಬಂಧ ಹೇರಿರುವ ದೆಹಲಿ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ, ಕ್ರೀಡಾ ಸಚಿವಾಲಯ ಹಾಗೂ ಭಾರತೀಯ ಒಲಿಂಪಿಕ್‌ ಸಂಸ್ಥೆ ಸುಪ್ರೀಂ ಕೋರ್ಟ್‌ನ ಮೊರೆ ಹೋಗಲು ನಿರ್ಧರಿಸಿವೆ. 2010ರಲ್ಲಿ ವಕೀಲ ರಾಹುಲ್‌ ಮೆಹ್ರಾ ಎಂಬುವವರು ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಮತ್ತು ಕ್ರೀಡಾ ಒಕ್ಕೂಟಗಳು (ಎನ್‌ಎಸ್‌ಎಫ್‌) ಸೂಕ್ತವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೋರಿ ಸಲ್ಲಿಸಿದ ಅರ್ಜಿಗೆ ಈ ವಿಷಯ ಸಂಬಂಧಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ನ್ಯಾಯಾಲಯವನ್ನು ಸಂಪರ್ಕಿಸದೆ ಎನ್ಎಸ್ಎಫ್‌ಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆಸಚಿವಾಲಯದ ಮೇಲೆ, ದೆಹಲಿ ಹೈಕೋರ್ಟ್ ನಿರ್ಬಂಧ ಹೇರಿತ್ತು. ಇದರ ಪರಿಣಾಮವಾಗಿ, ಸಚಿವಾಲಯವು 57 ಎನ್‌ಎಸ್‌ಎಫ್‌ಗಳಿಗೆ ನೀಡಿದ್ದ ಮಾನ್ಯತೆಯನ್ನು ಹಿಂತೆಗೆದುಕೊಳ್ಳಬೇಕಾಯಿತು. ‘ನಾವು ಒಂದು ಅಥವಾ ಎರಡು ದಿನಗಳಲ್ಲಿ ವಿಶೇಷ ಅವಕಾಶ ಅರ್ಜಿ(ಎಸ್‌ಎಲ್‌ಪಿ) ಸಲ್ಲಿಸುತ್ತಿದ್ದೇವೆ.ನ್ಯಾಯಾಲಯಕ್ಕೆ ತಿಳಿಸದೆ ಕ್ರೀಡಾ ಒಕ್ಕೂಟಗಳಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂಬ ದೆಹಲಿ ಹೈಕೋರ್ಟ್ ಆದೇಶವನ್ನು ನಾವು ಪ್ರಶ್ನಿಸಲಿದ್ದೇವೆ‘ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ. ಐಒಎ ಅಧ್ಯಕ್ಷ ನರಿಂದರ್‌ ಬಾತ್ರಾ ಹಾಗೂ ಕಾರ್ಯದರ್ಶಿ ರಾಜೀವ್‌ ಮೆಹ್ತಾ ಅವರೂ ಜಂಟಿ ಹೇಳಿಕೆ ನೀಡಿದ್ದು, ಪ್ರಕರಣದಲ್ಲಿ ನಾವೂ ಭಾಗೀದಾರರು ಆಗಿರುವುದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಶೀಘ್ರ ಮನವಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಕ್ರೀಡಾ ಸಚಿವಾಲಯವು, ಈ ತಿಂಗಳ ಏಳರಂದು ಆದೇಶವನ್ನು ಮಾರ್ಪಡಿಸಲು ಮತ್ತು ಎನ್‌ಎಸ್‌ಎಫ್‌ಗಳಿಗೆ ಮಾನ್ಯತೆಯನ್ನು ನೀಡಲು ಅನುಮತಿ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ ನ್ಯಾಯಾಲಯವು ಆ ಮನವಿಯನ್ನು ತಿರಸ್ಕರಿಸಿತ್ತು ಹಾಗೂ ರಾಷ್ಟ್ರೀಯ ಕ್ರೀಡಾ ನೀತಿಯನ್ನು ಪಾಲಿಸುತ್ತಿರುವ ಕುರಿತು ವರದಿ ಕೇಳಿತ್ತು. ಸಚಿವಾಲಯವು ಎನ್‌ಎಸ್‌ಎಫ್‌ಗಳಿಗೆ ತಮ್ಮ ಪದಾಧಿಕಾರಿಗಳ ವಯಸ್ಸು ಮತ್ತು ಅಧಿಕಾರಾವಧಿಯ ವಿವರಗಳನ್ನು ಕೋರಿ ಪ್ರಶ್ನಾವಳಿಗಳನ್ನು ಕಳುಹಿಸಿತ್ತು. ಒಟ್ಟು 56 ಎನ್‌ಎಸ್‌ಎಫ್‌ಗಳು ಈ ಕುರಿತು ಉತ್ತರ ನೀಡಿವೆ. ಈ ತಿಂಗಳ‌ 21ರಂದು ಹೈಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆ ನಡೆಯಬೇಕಿತ್ತು. ಇದನ್ನು ಸೆಪ್ಟೆಂಬರ್‌ 18ಕ್ಕೆ ಮುಂದೂಡಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.