ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಈಜುಕೊಳ ಉದ್ಘಾಟನೆ ಬೆಂಗಳೂರು: ಇಲ್ಲಿಯ ಜಯನಗರದ ಭೈರಸಂದ್ರ ವಾರ್ಡ್‌ನಲ್ಲಿ ನಿರ್ಮಾಣಗೊಂಡ ಅಂತರರಾಷ್ಟ್ರೀಯ ಮಟ್ಟದ ಈಜುಕೊಳದ ಉದ್ಘಾಟನೆ ಬುಧವಾರ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ಇದು ಕರ್ನಾಟಕದ ಮೊದಲ ಸುಸಜ್ಜಿತ ತಂತ್ರಜ್ಞಾನ ಹಾಗೂ ಸೌಲಭ್ಯವುಳ್ಳ ಈಜುಕೊಳ ವಾಗಿದೆ. ಶಿಕ್ಷಣಕ್ಕೆ ನಾವು ಮಹತ್ವ ನೀಡುವಷ್ಟು ಕ್ರೀಡೆಗೂ ನೀಡಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವಿದ್ಯಾರ್ಥಿ ದೆಸೆಯಿಂದಲೇ ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅತ್ಯವಶ್ಯ. ಕ್ರೀಡಾಪಟುಗಳಿಗೆ ಸೂಕ್ತ ಪ್ರೋತ್ಸಾಹ ಸಿಗಬೇಕು‘ ಎಂದರು. ತರಬೇತಿಗೆ ಅನುವಾಗುವಂತೆ ಈಜುಕೊಳವನ್ನು ನಿರ್ಮಿಸಲಾಗಿದೆ. ಬಿಸಿನೀರಿನ ಸೌಲಭ್ಯವೂ ಇದೆ. ಸುಮಾರು ಒಂದೂವರೆ ಎಕರೆ ವಿಸ್ತೀರ್ಣ ಹೊಂದಿದ್ದು, ಪಾರ್ಕಿಂಗ್ ಸೌಲಭ್ಯ ಹಾಗೂ ತರಬೇತಿ ಕೇಂದ್ರ ಕೂಡ ನಿರ್ಮಿಸಲಾಗಿದೆ. ಕಾರ್ಯಕ್ರಮದಲ್ಲಿ ಭೈರಸಂದ್ರ ವಾರ್ಡ್‌ ಸದಸ್ಯ ಎನ್. ನಾಗರಾಜ್ಅಧ್ಯಕ್ಷತೆ ವಹಿಸಿದ್ದರು. ಬಿಬಿಎಂಪಿಯ ಮುಖ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.