ಕೋವಿಡ್-19‌: ಪ್ಯಾರಿಸ್‌ ಮ್ಯಾರಥಾನ್ ರದ್ದು ಪ್ಯಾರಿಸ್‌: ಈ ಬಾರಿಯ ಪ್ಯಾರಿಸ್‌ ಮ್ಯಾರಥಾನ್‌ಅನ್ನು ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ. ಮ್ಯಾರಥಾನ್‌ನ ಸಂಘಟಕರು ಬುಧವಾರ ಈ ವಿಷಯ ತಿಳಿಸಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ನಿಗದಿಯಾಗಿದ್ದ ಟೂರ್ನಿಯನ್ನು ಅಕ್ಟೋಬರ್‌ಗೆ ಮುಂದೂಡಲಾಗಿತ್ತು. ‘ರೇಸ್‌ಅನ್ನು ಇತ್ತೀಚೆಗೆ ನವೆಂಬರ್‌ನಲ್ಲಿ ಮರುನಿಗದಿ ಮಾಡಲು ಪ್ರಯತ್ನಿಸಿದ್ದೆವು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಇರುವ ಪ್ರಯಾಣ ನಿರ್ಬಂಧಗಳಿಂದಾಗಿ ಸಾಧ್ಯವಾಗಲಿಲ್ಲ’ ಎಂದು ಸಂಘಟಕರು ತಿಳಿಸಿದ್ದಾರೆ. ‘ಹಲವು ಸ್ಪರ್ಧಿಗಳು ಅದರಲ್ಲೂ ವಿದೇಶಗಳಿಂದ ಬರುವವರು, ನವೆಂಬರ್ 14–15ರಂದು ನಡೆಯುವ ಟೂರ್ನಿಗೆ ಆಗಮಿಸಲು ಪ್ರಯಾಣ ನಿರ್ಬಂಧದ ತೊಂದರೆ ಎದುರಿಸುತ್ತಿದ್ದಾರೆ. ಹಾಗಾಗಿ ಈ ವರ್ಷದ ಮ್ಯಾರಥಾನ್ ರದ್ದು ಮಾಡುವುದು ಉತ್ತಮ ನಿರ್ಧಾರ ಎನಿಸುತ್ತದೆ‘ ಎಂದು ಟೂರ್ನಿಯ ಸಂಘಟಕರು ಹೇಳಿದ್ದಾರೆ. ಸಂಘಟಕರು ಇನ್ನು 2021ರ ಆವೃತ್ತಿಯತ್ತ ಗಮನಹರಿಸಲಿದ್ದಾರೆ. ಈ ವರ್ಷದ ಮ್ಯಾರಥಾನ್‌ಗೆ ನೋಂದಾಯಿಸಿಕೊಂಡ ಅಥ್ಲೀಟ್‌ಗಳು ಮುಂದಿನ ವರ್ಷಕ್ಕೂ ಸ್ವಯಂ ಅರ್ಹತೆ ಪಡೆಯುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.