ಡಿಟಿಎಂ ಚಾಂಪಿಯನ್‌ಷಿಪ್‌: ಮೈನಿ ಚೊಚ್ಚಲ ಪಾಯಿಂಟ್‌ ಗಳಿಕೆ ಸಾಧನೆ ನ್ಯೂರ್ಬರ್ಗ್ರಿಂಗ್, ಜರ್ಮನಿ: ಮರ್ಸಿಡಿಸ್ ಎಎಂಜಿ ಚಾಲಕ, ಬೆಂಗಳೂರಿನ ಅರ್ಜುನ್ ಮೈನಿ ಅವರು ಪ್ರತಿಷ್ಠಿತ ಡಿಟಿಎಂ ಚಾಂಪಿಯನ್‌ಷಿಪ್‌ನಲ್ಲಿ ಪಾಯಿಂಟ್‌ಗಳನ್ನು ಗಳಿಸಿದ ಭಾರತದ ಮೊದಲ ರೇಸ್ ಪಟು ಎಂದೆನಿಸಿಕೊಂಡಿದ್ದಾರೆ. ಸತತ ಎರಡು ಬಾರಿ ಅಗ್ರ 10ರೊಳಗೆ ಕಾಣಿಸಿಕೊಳ್ಳುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಹೆಸರಾಂತ ನ್ಯೂರ್ಬರ್ಗ್ರಿಂಗ್ ಸರ್ಕೀಟ್‌ನಲ್ಲಿ ನಡೆದ ಎರಡು ರೇಸ್‌ಗಳಲ್ಲಿ 10ನೇ ಸ್ಥಾನ ಮತ್ತು ಜೀವನಶ್ರೇಷ್ಠ ಏಳನೇ ಸ್ಥಾನ ಗಳಿಸುವುದರೊಂದಿಗೆ ಮೈನಿ ಗಮನ ಸೆಳೆದರು. ಕೆಲವು ಅನಿರೀಕ್ಷಿತ ಘಟನೆಗಳು ನಡೆದರೂ ಚೇತರಿಸಿಕೊಂಡು ಅವರು ಮುನ್ನುಗ್ಗಿದರು. ಗೆಟ್‌ ಸ್ಪೀಡ್ ತಂಡಕ್ಕಾಗಿ ರೇಸ್‌ನಲ್ಲಿ ಪಾಲ್ಗೊಂಡಿರುವ ಅವರು ಮೊದಲ ರೇಸ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡಿದರು. ಹೀಗಾಗಿ ಕೊನೆಯಲ್ಲಿ 12ನೇ ಸ್ಥಾನಕ್ಕೆ ಕುಸಿದರು. ನಂತರ ಅಮೋಘ ಸಾಮರ್ಥ್ಯ ತೋರಿದರು. ಈ ನಡುವೆ ಅಹಿತಕರ ಘಟನೆಗಳು ನಡೆದವು. ಆದರೂ 10ನೇ ಸ್ಥಾನ ಗಳಿಸುವಲ್ಲಿ ಮೈನಿ ಯಶಸ್ವಿಯಾದರು. ಅರ್ಹತಾ ಸುತ್ತಿನ ಎರಡನೇ ಘಟ್ಟದಲ್ಲಿ ಅಪಾಯಕಾರಿ ಸವಾಲುಗಳನ್ನು ಎದುರಿಸಿ ಸ್ಪರ್ಧಿಸಿ ಯಶಸ್ಸು ಕಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.