ಸಾರ್‌ಲೊರ್‌ಲಕ್ಷ್ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಮಾಳವಿಕಾ ಪರಾಭವ ಸಾರ್‌ಬ್ರೂಕನ್‌, ಜರ್ಮನಿ: ಭಾರತದ ಮಾಳವಿಕಾ ಬನ್ಸೋದ್‌ ಅವರು ಸಾರ್‌ಲೊರ್‌ಲಕ್ಷ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಬುಧವಾರ ನಡೆದ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ನೇರ ಗೇಮ್‌ಗಳಿಂದ ಈಸ್ಟೋನಿಯಾದ ಕ್ರಿಸ್ಟಿನಾ ಕೂಬಾ ಎದುರು ಸೋತರು. ಕೊರೊನಾ ವೈರಸ್‌ ಹಾವಳಿಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ಬಳಿಕ ಮೊದಲ ಬಾರಿ ಕಣಕ್ಕಿಳಿದಿದ್ದ ಮಾಳವಿಕಾ 12–21, 19–21ರಿಂದ ಕ್ರಿಸ್ಟಿನ್‌ ವಿರುದ್ಧ ಪರಾಭವಗೊಂಡರು. ಅರ್ಧತಾಸಿನಲ್ಲಿ ಪಂದ್ಯ ಮುಗಿಯಿತು. ಮಾಳವಿಕಾ ಅವರುಹೋದ ವರ್ಷ ಸತತ ಎರಡು ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದರು. ಪಂದ್ಯದ ಮೊದಲ ಗೇಮ್‌ನಲ್ಲಿ ಕ್ರಿಸ್ಟಿನಾ ಅವರಿಗೆ ಭಾರತದ ಆಟಗಾರ್ತಿಯಿಂದ ಹೆಚ್ಚು ಪೈಪೋಟಿ ಎದುರಾಗಲಿಲ್ಲ. ಆರಂಭದಿಂದಲೇ ಉತ್ತಮ ಸಾಮರ್ಥ್ಯ ತೋರಿದ ಕ್ರಿಸ್ಟಿನಾ, ವಿರಾಮದ ವೇಳೆಗೆ 11–4ರಿಂದ ಮುನ್ನಡೆಯಲ್ಲಿದ್ದರು. ಅದೇ ಲಯದಲ್ಲಿ ಮುಂದುವರಿದು ಗೇಮ್‌ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಮಾಳವಿಕಾ ತಿರುಗೇಟು ನೀಡುವ ಸೂಚನೆ ನೀಡಿದರು. ವಿರಾಮದ ವೇಳೆ ಅವರು ಕೇವಲ ಒಂದು ಪಾಯಿಂಟ್‌ (10–11) ಹಿನ್ನಡೆಯಲ್ಲಿದ್ದರು. ಬಳಿಕ ಸತತ ಐದು ಪಾಯಿಂಟ್ಸ್‌ ಕಲೆಹಾಕಿ 17–15ಕ್ಕೆ ಮುನ್ನಡೆದರು. ಆದರೆ ಅನುಭವಿ ಆಟಗಾರ್ತಿ ಕ್ರಿಸ್ಟಿನಾ ಸುಲಭವಾಗಿ ಪಂದ್ಯ ಬಿಟ್ಟುಕೊಡಲಿಲ್ಲ. 21–19ರಿಂದ ಗೇಮ್‌ ಗೆದ್ದುಕೊಂಡು, ಎರಡನೇ ಸುತ್ತಿಗೆ ಕಾಲಿಟ್ಟರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.