ಎಟಿಪಿ ಫೈನಲ್ಸ್: ಸೆಮಿಫೈನಲ್‌ಗೆ ರಫೆಲ್‌ ನಡಾಲ್ ಲಂಡನ್‌: ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ರಫೆಲ್‌ ನಡಾಲ್‌ ಅವರು ಎಟಿಪಿ ಫೈನಲ್ಸ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಐದು ವರ್ಷಗಳಲ್ಲಿ ಮೊದಲ ಬಾರಿ ಟೂರ್ನಿಯ ನಾಲ್ಕರ ಘಟ್ಟ ತಲುಪಿರುವ ಅವರು, ಈ ಹಾದಿಯಲ್ಲಿ ಹಾಲಿ ಚಾಂಪಿಯನ್‌ ಸ್ಟೆಫನೋಸ್ ಸಿಸಿಪಸ್‌ ಅವರನ್ನು ಸೋಲಿಸಿದರು. ಇಲ್ಲಿಯ ಓ2 ಅರೆನಾದಲ್ಲಿ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ 6–4, 4–6, 6–2ರ ಜಯ ಅವರಿಗೆ ಒಲಿಯಿತು. ಎಟಿಪಿ ಫೈನಲ್ಸ್ ಟೂರ್ನಿಯಲ್ಲಿ ಸ್ಪೇನ್ ಆಟಗಾರ ನಡಾಲ್‌ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ಅವರಿಗೆ ಜಯದ ಉತ್ತಮ ಅವಕಾಶ ಒದಗಿಬಂದಿದೆ. ಹೋದ ವರ್ಷದ ಟೂರ್ನಿಯಲ್ಲಿ ಮೊದಲ ಬಾರಿ ಟ್ರೋಫಿಗೆ ಮುತ್ತಿಕ್ಕಿದ್ದ ಗ್ರೀಕ್‌ ಆಟಗಾರ ಸಿಸಿಪಸ್‌, ಈ ಬಾರಿ ಗುಂಪುಹಂತದ ಎರಡು ಪಂದ್ಯಗಳಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದರು. ನಡಾಲ್ ಅವರು ಮೂರು ಬಾರಿ ಸಿಸಿಪಸ್ ಅವರ ಸರ್ವ್‌ ಮುರಿದರು. ಸಿಸಿಪಸ್‌ ಎದುರು 6–1 ಗೆಲುವಿನ ದಾಖಲೆ ಹೊಂದಿರುವ ನಡಾಲ್‌, ಶನಿವಾರ ನಡೆಯುವ ಸೆಮಿಫೈನಲ್‌ ಹಣಾಹಣಿಯಲ್ಲಿ ಡೇನಿಯಲ್‌ ಮೆಡ್ವೆಡೆವ್‌ ಅವರನ್ನು ಎದುರಿಸಲಿದ್ದಾರೆ. ಗುರುವಾರ ನಡೆದ ಮತ್ತೊಂದು ಪಂದ್ಯದಲ್ಲಿ, ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ಆ್ಯಂಡ್ರೆ ರುಬ್ಲೆವ್‌ 6–2, 7–5ರಿಂದ ಅಮೆರಿಕ ಓಪನ್‌ ಚಾಂಪಿಯನ್‌ ಡಾಮಿನಿಕ್‌ ಥೀಮ್‌ ಅವರನ್ನು ಪರಾಭವಗೊಳಿಸಿದರು. ಆದರೆ ಈಗಾಗಲೇ ಸಿಸಿಪಸ್‌ ಹಾಗೂ ನಡಾಲ್‌ ಅವರಿಗೆ ಸೋಲುಣಿಸಿರುವ ಥೀಮ್‌ ಗುಂಪುಹಂತದಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಮುಂದಿನ ಪಂದ್ಯದಲ್ಲಿ ಥೀಮ್‌ ಅವರು, ನೊವಾಕ್‌ ಜೊಕೊವಿಚ್‌ ಹಾಗೂ ಅಲೆಕ್ಸಾಂಡರ್‌ ಜ್ವೆರೆವ್ ನಡುವೆ ನಡೆಯುವ ಪಂದ್ಯದ ವಿಜೇತರಿಗೆ ಮುಖಾಮುಖಿಯಾಗಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.