ಭಾರತ ಬ್ಯಾಸ್ಕೆಟ್‌ಬಾಲ್ ತಂಡಕ್ಕೆ ಏಷ್ಯಾಕಪ್ ಅರ್ಹತೆ; ಸತತ 10ನೇ ಬಾರಿ ಪ್ರವೇಶ ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಭಾರತ ಬ್ಯಾಸ್ಕೆಟ್‌ಬಾಲ್ ತಂಡವು ಫಿಬಾ ಏಷ್ಯಾಕಪ್ ಟೂರ್ನಿಗೆ ಸತತ 10ನೇ ಬಾರಿ ಅರ್ಹತೆ ಗಿಟ್ಟಿಸಿತು. ಇದರೊಂದಿಗೆ 2023ರ ವಿಶ್ವಕಪ್‌ ಟೂರ್ನಿಯ ಕ್ವಾಲಿಫೈಯರ್ಸ್‌ನಲ್ಲಿ ಆಡಲೂ ಅರ್ಹತೆ ಗಳಿಸಿತು. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಅರ್ಹತಾ ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ 61–80ರಿಂದ ಆತಿಥೇಯ ತಂಡಕ್ಕೆ ಮಣಿಯಿತು. ಆದರೆ ಎರಡನೇ ಪಂದ್ಯದಲ್ಲಿ ಪುಟಿದೆದ್ದು ಎರಡು ಪಾಯಿಂಟ್ಸ್‌ಗಳಿಂದ (79–77) ಪ್ಯಾಲೆಸ್ಟಿನ್ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ‘ಎಚ್‌’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು. ಏಷ್ಯಾಕಪ್ ಟೂರ್ನಿಯು 2022ರ ಜುಲೈನಲ್ಲಿ ಇಂಡೊನೇಷ್ಯಾದ ಜಕಾರ್ತದಲ್ಲಿ ನಿಗದಿಯಾಗಿದೆ. ಇಂಡೊನೇಷ್ಯಾ, ಲೆಬನಾನ್‌, ಬಹರೇನ್‌, ಪಿಲಿಪ್ಪೀನ್ಸ್, ಕೊರಿಯಾ, ಚೀನಾ, ಜಪಾನ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಇರಾನ್‌, ಸಿರಿಯಾ, ಜೋರ್ಡಾನ್‌, ಕಜಕಸ್ತಾನ ಮತ್ತು ಸೌದಿ ಅರೇಬಿಯಾ ಏಷ್ಯಾಕಪ್ ಟೂರ್ನಿಗೆ ಅರ್ಹತೆ ಗಳಿಸಿದ ಇನ್ನುಳಿದ ತಂಡಗಳು. ತಂಡಕ್ಕೆ ₹ 10 ಲಕ್ಷ ಬಹುಮಾನ: ಭಾರತ ತಂಡವನ್ನು ಅಭಿನಂದಿಸಿರುವ ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಕೆ.ಗೋವಿಂದರಾಜು ₹ 10 ಲಕ್ಷ ಬಹುಮಾನ ಪ್ರಕಟಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.