ಮೇ 11ರಿಂದ ಇಂಡಿಯಾ ಓಪನ್ ಟೂರ್ನಿ ನವದೆಹಲಿ: ಇಂಡಿಯಾ ಓಪನ್‌ ಸೂಪರ್‌ 500ಬ್ಯಾಡ್ಮಿಂಟನ್ ಟೂರ್ನಿಯು ಮೇ 11ರಿಂದ 16ರವರೆಗೆ ನಡೆಯಲಿದ್ದು, ಟೋಕಿಯೊ ಒಲಿಂಪಿಕ್‌ ಕೂಟಕ್ಕೆ ಕೊನೆಯ ಅರ್ಹತಾ ಟೂರ್ನಿಯಾಗಲಿದೆ. 2021ರ ವರ್ಷದ ಮೊದಲಾರ್ಧದ ಟೂರ್ನಿಗಳ ವೇಳಾಪಟ್ಟಿಯನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ (ಬಿಡಬ್ಲ್ಯುಎಫ್‌) ಮಂಗಳವಾರ ಪ್ರಕಟಿಸಿದೆ. ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗಳು ಮುಂದಿನ ವರ್ಷದಿಂದ ಪುನರಾರಂಭವಾಗಲಿದ್ದು, ಮಾರ್ಚ್‌ 2ರಿಂದ 7ರವರೆಗೆ ನಡೆಯುವ ಸ್ವಿಸ್‌ ಓಪನ್ ಮೊದಲು ನಡೆಯಲಿದೆ. ಬಳಿಕ ಅದೇ ತಿಂಗಳ 9ರಿಂದ 14ರವರೆಗೆ ಜರ್ಮನ್ ಓಪನ್ ಟೂರ್ನಿ ನಿಗದಿಯಾಗಿದೆ. ‘ಒಲಿಂಪಿಕ್ಸ್ ಅರ್ಹತಾ ಅವಧಿಯಲ್ಲಿ ಒಟ್ಟು 17 ಟೂರ್ನಿಗಳು ನಡೆಯಲಿದ್ದು, ಇದರಲ್ಲಿ ಇಂಡಿಯಾ ಓಪನ್ ಕೊನೆಯದು. ಮೇ 18ರಂದು ರ‍್ಯಾಂಕಿಂಗ್ ಪ್ರಕಟಿಸಲಾಗುತ್ತದೆ. ಈ ಟೂರ್ನಿಗಳ ಮೂಲಕ 2021ರ ಟೋಕಿಯೊ ಕೂಟಕ್ಕೆ ಶ್ರೇಯಾಂಕಗಳನ್ನೂ ನಿರ್ಧರಿಸಲಾಗುತ್ತದೆ‘ ಎಂದು ಬಿಡಬ್ಲ್ಯುಎಫ್ ಹೇಳಿದೆ. ಈ ವರ್ಷದ ಇಂಡಿಯಾ ಓಪನ್ ಟೂರ್ನಿಯು ಮಾರ್ಚ್‌ನಲ್ಲಿ ನಿಗದಿಯಾಗಿತ್ತು. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಡಿಸೆಂಬರ್ 8ಕ್ಕೆ ಮುಂದೂಡಲಾಗಿತ್ತು. ಬಳಿಕ ಟೂರ್ನಿಯನ್ನೇ ರದ್ದು ಮಾಡಲಾಗಿತ್ತು. ಥಾಯ್ಲೆಂಡ್‌ನಲ್ಲಿ ಮುಂದಿನ ವರ್ಷದ ಜನೆವರಿ 27ರಿಂದ 31ರವರೆಗೆ ನಿಗದಿಯಾಗಿರುವ ಎಚ್‌ಎಸ್‌ಬಿಸಿ ವಿಶ್ವ ಟೂರ್ ಫೈನಲ್ಸ್‌ನ ಟೂರ್ನಿಯ ಮೂಲಕ ವಿಶ್ವ ರ‍್ಯಾಂಕಿಂಗ್ಸ್ ಪುನರರಾಂಭವಾಗಲಿದೆ. ಈ ವರ್ಷದ ಆರಂಭದಲ್ಲಿ ಮುಂದೂಡಲಾಗಿದ್ದ ಥಾಮಸ್‌ ಮತ್ತು ಉಬರ್ ಕಪ್ ಟೂರ್ನಿಯನ್ನು ಮುಂದಿನ ವರ್ಷದ ಅಕ್ಟೋಬರ್‌ನಲ್ಲಿ ಡೆನ್ಮಾರ್ಕ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.