ಕುಸ್ತಿ ವಿಶ್ವಕಪ್: ಭಾರತದ ಅನ್ಶು ಮಲಿಕ್‌ಗೆ ಬೆಳ್ಳಿ ಬಿಲ್‌ಗ್ರೇಡ್‌: ಭಾರತದ ಅನ್ಶು ಮಲಿಕ್ ಇಲ್ಲಿ ನಡೆಯುತ್ತಿರುವ ವೈಯಕ್ತಿಕ ವಿಶ್ವಕಪ್ ಕುಸ್ತಿಯ ಮಹಿಳಾ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು. 57 ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿದ ಅವರು ಭಾರತಕ್ಕೆ ಪದಕ ತಂದುಕೊಟ್ಟ ಏಕೈಕ ಕುಸ್ತಿಪಟು ಎನಿಸಿಕೊಂಡರು. ಮೊಲ್ಡೊವಾದ ಅನಸ್ತೇಸಿಯಾ ನಿಚಿತಾ ಎದುರು ಬುಧವಾರ ರಾತ್ರಿ ನಡೆದ ಬೌಟ್‌ನಲ್ಲಿ ಅವರು 1–5ರಲ್ಲಿ ಸೋತು ಬೆಳ್ಳಿಗೆ ಸಮಾಧಾನಪಟ್ಟುಕೊಂಡರು. ಜೂನಿಯರ್ ವಿಭಾಗದಲ್ಲಿ ಮಿಂಚಿದ್ದ ಅನ್ಶು ಸೀನಿಯರ್ ವಿಭಾಗದಲ್ಲಿ ಈ ವರೆಗೆ ಮೂರು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. ಮೂರೂ ಸ್ಪರ್ಧೆಗಳಲ್ಲಿ ‍ಪದಕ ಗೆದ್ದು ಗಮನ ಸೆಳೆದಿದ್ದಾರೆ. ನವದೆಹಲಿಯಲ್ಲಿ ಈ ವರ್ಷದ ಆರಂಭದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅವರು ನಂತರ ರೋಮ್‌ನಲ್ಲಿ ನಡೆದಿದ್ದ ಮಟಿಯೊ ಪೆಲಿಕಾನ್ ಟೂರ್ನಿಯಲ್ಲಿ ಬೆಳ್ಳಿ ಗಳಿಸಿದ್ದರು. ಬುಧವಾರ 4–2ರಲ್ಲಿ ಅಜರ್‌ಬೈಜಾನ್‌ನ ಅಲಿಯೋನಾ ಕೊಲೆಸ್ನಿಕ್ ಎದುರು ಗೆದ್ದಿದ್ದ ಭಾರತದ ಕುಸ್ತಿಪಟು ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಲಾರಾ ಮರ್ಟೆನ್ಸ್‌ ವಿರುದ್ಧ 3–1ರಲ್ಲಿ ಜಯ ಗಳಿಸಿದ್ದರು. ನಾಲ್ಕರ ಘಟ್ಟದಲ್ಲಿ ರಷ್ಯಾದ ವೆರೋನಿಕಾ ಚುಮಿಕೋವಾ ಎದುರು ಪಾರಮ್ಯ ಮೆರೆದು ಪದಕ ಸುತ್ತಿಗೆ ಪ್ರವೇಶಿಸಿದ್ದರು. ಭಾರತದ ಪಿಂಕಿ 55 ಕೆಜಿ ವಿಭಾಗದಲ್ಲಿ ಉತ್ತಮ ಸಾಮರ್ಥ್ಯ ತೋರಿ ಭರವಸೆ ಮೂಡಿಸಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಬೆಲಾರಸ್‌ನ ಐರಿನಾ ಕುರಚ್ಕೀನಾಗೆ ಮಣಿದರು. ಕಂಚಿನ ಪದಕಕ್ಕಾಗಿ ನಡೆದ ಬೌಟ್‌ನಲ್ಲಿ ರಷ್ಯಾದ ಓಲ್ಗಾ ಕೊರೊಶಟ್ಸೇವಾ ವಿರುದ್ಧ ಸೋತು ನಿರಾಸೆ ಅನುಭವಿಸಿದರು. 59 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸರಿತಾ, 62 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸೋನಮ್ ಮಲಿಕ್ ಮತ್ತು 65 ಕೆಜಿ ವಿಭಾಗದಲ್ಲಿ ಕಣಕ್ಕೆ ಇಳಿದಿದ್ದ ಸಾಕ್ಷಿ ಮಲಿಕ್ ಅವರ ಹೋರಾಟ ಕ್ವಾರ್ಟರ್ ಫೈನಲ್‌ನಲ್ಲಿ ಮುಕ್ತಾಯಗೊಂಡಿತು. ಅನುಭವಿ ಗುರುಶರಣ್ ಪ್ರೀತ್ 72 ಕೆಜಿ ವಿಭಾಗದಲ್ಲಿ ರೆಪಚೇಜ್ ಅವಕಾಶ ಪಡೆದುಕೊಂಡಿದ್ದರು. ಆದರೆ ಎವ್ಜಿನಿಯಾ ಜಕ್ರಚೆಂಕೊ ಎದುರು ಸೋತರು. ನಿರ್ಮಲಾ ದೇವಿ (50 ಕೆಜಿ) ಹಾಗೂ ಕಿರಣ್ (76 ಕೆಜಿ) ಅವರು ಅರ್ಹತಾ ಸುತ್ತಿನಲ್ಲೇ ಹೊರಬಿದ್ದರು. ನಿರ್ಮಲಾ 6–9ರಲ್ಲಿ ಪೋಲೆಂಡ್‌ನ ಅನಾ ಲುಕಾಸಿಯಾಕ್ ವಿರುದ್ಧ ಮತ್ತು ಕಿರಣ್ ಕೆನಡಾದ ಎರಿಕಾ ಎಲಿಜಬೆತ್ ವಿರುದ್ಧ ಸೋತರು. ಗ್ರೀಕೊ ರೋಮನ್ ವಿಭಾಗದಲ್ಲಿ ಅರ್ಜುನ್ ಹಲಕುರ್ಕಿ ಅವರೊಬ್ಬರೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಕಿರ್ಗಿಸ್ತಾನದ ಬಲ್ಬೈ ಡೊರ್ಡೊಕೊವ್‌ ವಿರುದ್ಧ 5–10ರಲ್ಲಿ ಸೋತರು. ಉಳಿದವರೆಲ್ಲರೂ ಅರ್ಹತಾ ಸುತ್ತಿನಲ್ಲೇ ಹೊರಬಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.