ವಿಶ್ವಕಪ್ ಬಾಕ್ಸಿಂಗ್‌: ಫೈನಲ್‌ಗೆ ಸಿಮ್ರನ್‌ಜೀತ್‌ ನವದೆಹಲಿ: ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತೆ ಭಾರತದ ಸಿಮ್ರನ್‌ಜೀತ್ ಕೌರ್‌ ಅವರು ಜರ್ಮನಿಯ ಕೊಲೊನ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಫೈನಲ್ಸ್ ತಲುಪಿದ್ದಾರೆ. ಶುಕ್ರವಾರ ನಡೆದ 60 ಕೆಜಿ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ ಅವರು ಉಕ್ರೇನ್‌ನ ಮರಿಯಾನಾ ಬ್ಯಾಸನೆಟ್ಸ್ ಅವರನ್ನು 4–1ರಿಂದ ಸೋಲಿಸಿದರು. 57 ಕೆಜಿ ವಿಭಾಗದಲ್ಲಿ ಸೋನಿಯಾ ಲಾಥರ್ ಅವರು 3–2ರಿಂದ ಉಕ್ರೇನ್‌ನ ಸ್ನಿಜಾನಾ ಖೊಲೊಡ್ಕೊವಾ ವಿರುದ್ಧ ಗೆದ್ದು ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು. ಮುಂದಿನ ಪಂದ್ಯದಲ್ಲಿ ಅವರು ಭಾರತದವರೇ ಆದ ಮನೀಷಾ ಅವರನ್ನು ಎದುರಿಸಲಿದ್ದಾರೆ. ಮನೀಷಾ ಸೆಮಿಫೈನಲ್‌ಗೆ ಬೈ ಪಡೆದಿದ್ದಾರೆ. ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಸತೀಶ್‌ ಕುಮಾರ್ (+91 ಕೆಜಿ), 5–0ರಿಂದ ಮೊಲ್ಡೊವಾದ ಜಾಯಂಟಿನ್ ಅಲೆಕ್ಸೆಲ್‌ ಎದುರು ಗೆದ್ದು ಸೆಮಿಫೈನಲ್ ತಲುಪಿದರು. 57 ಕೆಜಿ ವಿಭಾಗದಲ್ಲಿ ಮೊಹಮ್ಮದ್ ಹಸಾಮುದ್ದೀನ್‌ ಕೂಡ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು. ಜರ್ಮನಿಯ ಬಜ್ವಾ ಎದುರು 5–0ಯಿಂದ ಅವರು ಗೆದ್ದರು. 57 ಕೆಜಿ ವಿಭಾಗದ ಇನ್ನೆರಡು ಬೌಟ್‌ಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಗೌರವ್‌ ಸೋಳಂಕಿ ಅವರು ಜರ್ಮನಿಯ ಮುರಾತ್ ಎಲ್ದಿರಿಮ್‌ ಅವರ ಸವಾಲು ಮೀರಿದರೆ, ಕವಿಂದರ್ ಸಿಂಗ್ ಬಿಷ್ತ್ ಅವರು ಫ್ರಾನ್ಸ್‌ನ ಸ್ಯಾಮ್ಯುಯೆಲ್ ಕಿಸ್ತೊಹರ್ರಿ ಅವರನ್ನು ಪರಾಭವಗೊಳಿಸಿದರು. 75 ಕೆಜಿ ವಿಭಾಗದ ಬೌಟ್‌ನಲ್ಲಿ ಆಶಿಶ್ ಕುಮಾರ್ ಅವರು 1–3ರಿಂದ ನೆದರ್ಲೆಂಡ್ಸ್‌ನ ಮ್ಯಾಕ್ಸ್ ವ್ಯಾನ್ ಡರ್ ಪಾಸ್‌ ಎದುರು ಮುಗ್ಗರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.