ವಿಶ್ವಕಪ್ ಬಾಕ್ಸಿಂಗ್‌: ಸಿಮ್ರನ್‌ಜೀತ್, ಮನೀಷಾಗೆ ಚಿನ್ನ ನವದೆಹಲಿ: ಭಾರತದ ಮಹಿಳಾ ಬಾಕ್ಸರ್‌ಗಳಾದ ಸಿಮ್ರನ್‌ಜೀತ್ ಕೌರ್ ಹಾಗೂ ಮನೀಷಾ ಅವರು ಜರ್ಮನಿಯ ಕೊಲೊನ್‌ನಲ್ಲಿ ನಡೆದ ವಿಶ್ವಕಪ್‌ ಬಾಕ್ಸಿಂಗ್ ಟೂರ್ನಿಯಲ್ಲಿ ಭಾನುವಾರ ಚಿನ್ನದ ಪದಕಗಳಿಗೆ ಮುತ್ತಿಟ್ಟಿದ್ದಾರೆ. 57 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ ಮನೀಷಾ ಅವರು 3–2ರಿಂದ ಭಾರತದವರೇ ಆದ ಸಾಕ್ಷಿ ಅವರನ್ನು ಸೋಲಿಸಿದರು. ಸಿಮ್ರನ್‌ಜೀತ್ (60 ಕೆಜಿ) ಅವರು ಚಿನ್ನದ ಪದಕದ ಸುತ್ತಿನಲ್ಲಿ 4–1ರಿಂದ ಜರ್ಮನಿಯ ಮಾಯಾ ಕ್ಲೆನ್ಹಾಸ್‌ ಸವಾಲು ಮೀರಿದರು. ಭಾರತ ತಂಡವು ಒಟ್ಟು ಒಂಬತ್ತು ಪದಕಗಳನ್ನು (ಮೂರು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚು) ಗೆದ್ದುಕೊಂಡು ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸಿತು. ಏಷ್ಯನ್‌ ಗೇಮ್ಸ್ ಚಾಂಪಿಯನ್‌ ಅಮಿತ್ ಪಂಗಲ್‌ (52 ಕೆಜಿ) ಶನಿವಾರ ಚಿನ್ನದ ಪದಕ ಗಳಿಸಿದ್ದರು. ಫೈನಲ್‌ ಹಣಾಹಣಿಯಲ್ಲಿ ಅವರಿಗೆ ವಾಕ್‌ಓವರ್ ಸಿಕ್ಕಿತ್ತು. ಗಾಯದ ಹಿನ್ನೆಲೆಯಲ್ಲಿ ಫೈನಲ್‌ನಲ್ಲಿ ಸ್ಪರ್ಧಿಸದ ಅನುಭವಿ ಸತೀಶ್‌ ಕುಮಾರ್‌ (+91 ಕೆಜಿ) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಸೋನಿಯಾ ಲಾಥರ್‌ (57 ಕೆಜಿ), ಪೂಜಾ ರಾಣಿ (75 ಕೆಜಿ), ಗೌರವ್‌ ಸೋಳಂಕಿ (57 ಕೆಜಿ) ಹಾಗೂ ಮೊಹಮ್ಮದ್ ಹಸಾಮುದ್ದೀನ್‌ (57 ಕೆಜಿ) ಕಂಚಿನ ಪದಕಗಳಿಗೆ ಒಡೆಯರಾದರು. ಆತಿಥೇಯ ಜರ್ಮನಿ, ಬೆಲ್ಜಿಯಂ, ಕ್ರೊವೇಷ್ಯಾ, ಡೆನ್ಮಾರ್ಕ್‌, ಫ್ರಾನ್ಸ್, ಮೊಲ್ಡೊವಾ, ನೆದರ್ಲೆಂಡ್ಸ್, ಪೋಲೆಂಡ್‌ ಹಾಗೂ ಉಕ್ರೇನ್‌ನ ಬಾಕ್ಸರ್‌ಗಳು ಟೂರ್ನಿಯಲ್ಲಿ ಸ್ಪರ್ಧಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.