ಪೂರ್ಣಪ್ರಮಾಣದ ತಂಡ ಪ್ರಕಟಿಸಿದ ಭಾರತ ಬ್ಯಾಡ್ಮಿಂಟನ್ ಸಂಸ್ಥೆ ನವದೆಹಲಿ: ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಸೇರಿದಂತೆ ಬ್ಯಾಂಕಾಕ್‌ನಲ್ಲಿ ಜನವರಿಯಲ್ಲಿ ನಡೆಯಲಿರುವ ಪ್ರಮುಖ ಬ್ಯಾಡ್ಮಿಂಟನ್ ಟೂರ್ನಿಗಳಿಗೆ ಪೂರ್ಣಪ್ರಮಾಣದ ತಂಡವನ್ನು ಕಳುಹಿಸಲು ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ನಿರ್ಧರಿಸಿದೆ. ಪಿ.ವಿ.ಸಿಂಧು, ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್, ಬಿ.ಸಾಯ್ ಪ್ರಣೀತ್, ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ, ಚಿರಾಗ್ ಶೆಟ್ಟಿ, ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರು ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕೋವಿಡ್–19ರ ಕಾಟ ಆರಂಭವಾದಾಗಿನಿಂದ ಶ್ರೀಕಾಂತ್ ಹೊರತುಪಡಿಸಿ ಭಾರತದ ಬ್ಯಾಡ್ಮಿಂಟನ್ ಪಟುಗಳು ಯಾವುದೇ ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಂಡಿಲ್ಲ. ಅಕ್ಟೋಬರ್‌ನಲ್ಲಿ ನಡೆದಿದ್ದ ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಶ್ರೀಕಾಂತ್ ಸ್ಪರ್ಧಿಸಿದ್ದರು. ಜನವರಿ 12ರಿಂದ 17ರ ವರೆಗೆ ನಡೆಯಲಿರುವ ಥಾಯ್ಲೆಂಡ್ ಓಪನ್‌ನಲ್ಲಿ ಭಾರತದ ಕ್ರೀಡಾಪಟುಗಳು ಈ ಋತುವಿನಲ್ಲಿ ಮೊದಲ ಬಾರಿ ಕಣಕ್ಕೆ ಇಳಿಯಲಿದ್ದಾರೆ. ಥಾಯ್ಲೆಂಡ್ ಓಪನ್‌ನ ಮತ್ತೊಂದು ಆವೃತ್ತಿ ಜನವರಿ 19ರಿಂದ 24ರ ವರೆಗೆ ನಡೆಯಲಿದ್ದು 27ರಿಂದ 31ರ ವರೆಗೆ ವಿಶ್ವ ಟೂರ್‌ ಫೈನಲ್ಸ್ ನಡೆಯಲಿದ್ದು ಅದರಲ್ಲೂ ಈ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ‘ಬ್ಯಾಡ್ಮಿಂಟನ್ ಅಂಗಣಗಳು ಮತ್ತೆ ಚಟುವಟಿಕೆಗೆ ಸಜ್ಜಾಗಿರುವುದು ಸಂತಸ ತಂದಿದೆ. ಭಾರತದ ಬ್ಯಾಡ್ಮಿಂಟನ್ ಪಟುಗಳ ಪೈಕಿ ಹೆಚ್ಚಿನವರು ಏಳೆಂಟು ತಿಂಗಳಿಂದ ಸ್ಪರ್ಧಾ ಕಣಕ್ಕೆ ಇಳಿಯಲಿಲ್ಲ. ಥಾಯ್ಲೆಂಡ್ ಓಪನ್ ಮೂಲಕ ಅವರು ಲಯಕ್ಕೆ ಮರಳುವ ವಿಶ್ವಾಸವಿದೆ’ ಎಂದು ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ಅಭಿಪ್ರಾಯಪಟ್ಟರು. ‘ಬ್ಯಾಡ್ಮಿಂಟನ ಪಟುಗಳು ತರಬೇತಿ ಶಿಬಿರಗಳಲ್ಲಿ ಸಾಕಷ್ಟು ಬೆವರು ಸುರಿಸುತ್ತಿದ್ದಾರೆ. ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳುವುದಕ್ಕೂ ಮೊದಲು ಸಾಮರ್ಥ್ಯ ವೃದ್ಧಿಸಿಕೊಳ್ಳಲು ಅನುಕೂಲ ಆಗಲಿ ಎಂಬ ಉದ್ದೇಶದಿಂದ ಥಾಯ್ಲೆಂಡ್‌ಗೆ ಪೂರ್ಣಪ್ರಮಾಣದ ತಂಡವನ್ನು ಕಳುಹಿಸಲು ನಿರ್ಧರಿಸಲಾಗಿದೆ’ ಎಂದು ಅವರು ವಿವರಿಸಿದರು. ತಂಡದೊಂದಿಗೆ ಸಿಂಗಲ್ಸ್ ಕೋಚ್‌ಗಳಾದ ಆಗಸ್ ದ್ವಿ ಸ್ಯಾಂಟೋಸ್, ಪಾರ್ಕ್ ಟೆ ಸ್ಯಾಂಗ್ ಮತ್ತು ಡಬಲ್ಸ್ ಕೋಚ್ ದ್ವಿ ಕ್ರಿಸ್ಟಿಯಾವಾನ್ ಜೊತೆ ನೆರವು ಸಿಬ್ಬಂದಿಯಾದ ಕಿರಣ್ ಚಲಂಗುಡ್ಲ, ಜಾನ್ಸನ್, ಇವಾಂಜಲಿನಾ ಬದ್ದಾಮ್ ಹಾಗೂ ಎಂ.ಶ್ರೀಕಾಂತ್ ತೆರಳಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.