ವಿಶ್ವ ಚಾಂಪಿಯನ್‌ಷಿಪ್‌ನತ್ತ ಅಶ್ವಿನಿ ಚಿತ್ತ ಬೆಂಗಳೂರು: ಅಥ್ಲೆಟಿಕ್ಸ್‌ನಲ್ಲಿ 100, 200 ಮೀಟರ್ಸ್ ಓಟದ ವೇಗವನ್ನು ನೋಡಿದಾಗಲೆಲ್ಲ ಮೈಜುಮ್ಮೆನ್ನುವುದು ಸಹಜ. ದೂರ ಅಂತರದ ಓಟವನ್ನು ಕಣ್ತುಂಬಿಕೊಳ್ಳುವವರು ಅಥ್ಲೀಟ್‌ಗಳ ದೈಹಿಕ ಕ್ಷಮತೆಗೆ ಅಚ್ಚರಿಪಡುವುದೂ ಅಷ್ಟೇ ಸಹಜ. ಮ್ಯಾರಥಾನ್‌, ದೀರ್ಘ ಅಂತರದ ನಡಿಗೆ ಮುಂತಾದ ಸ್ಪರ್ಧೆಗಳ ಬಗ್ಗೆ ಕೇಳುವಾಗಲೇ ಅಬ್ಬಬ್ಬ ಅನಿಸುವುದರಲ್ಲೂ ವಿಶೇಷವಿಲ್ಲ. ಇಂಥ ಪರಿಸ್ಥಿತಿಯಲ್ಲಿ 12 ಅಥವಾ 24 ತಾಸು ಓಟದ ಕುರಿತು ಕಲ್ಪನೆ ಮಾಡಿಕೊಳ್ಳಲು ಸಾಧ್ಯವೇ…? ಸಾಧ್ಯ. ಅಲ್ಟ್ರಾ ರನ್‌ ಅಥವಾ ಅಲ್ಟ್ರಾ ಮ್ಯಾರಥಾನ್ ಎಂಬ ಈ ಓಟ ದೇಶದಲ್ಲಿ ಈಗ ಪ್ರವರ್ಧಮಾನದಲ್ಲಿದೆ. ಜನವರಿ 23 ಮತ್ತು 24ರಂದು ಬೆಂಗಳೂರು ನಗರವೂ ಅಲ್ಟ್ರಾ ಮ್ಯಾರಥಾನ್‌ಗೆ ಸಾಕ್ಷಿಯಾಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆ, ರೊಮೇನಿಯಾದ ತಿಮಿಸೋರಾದಲ್ಲಿ ನಡೆಯಲಿರುವ ಐಎಯು ವಿಶ್ವ 24 ತಾಸು ಓಟದ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸುವ ‘ಟ್ರಯಲ್’ ಕೂಡ ಆಗಿತ್ತು. ಬೆಂಗಳೂರಿನ ಅಶ್ವಿನಿ ಗಣಪತಿ ಭಟ್ ‌ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ಆಯ್ಕೆಯಾದ ರಾಜ್ಯದ ಏಕೈಕ ಕ್ರೀಡಾಪಟು. 180.8 ಕಿಲೋಮೀಟರ್‌ ಅವರು ಪೂರೈಸಿದ ದೂರ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದವರು ಅಶ್ವಿನಿ. ತಂದೆ ಗಣಪತಿ, ತಾಯಿ ಶಿರಸಿಯ ಕುಸುಮಾ. ಅಶ್ವಿನಿ ಸಣ್ಣವರಿದ್ದಾಗ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು. ರಾಜಧಾನಿಯಲ್ಲಿ ಬೆಳೆದ ಅಶ್ವಿನಿ ಶಾಲೆ–ಕಾಲೇಜು ದಿನಗಳಲ್ಲಿ ಓಟ, ಹಾಕಿ, ಕೊಕ್ಕೊದಲ್ಲಿ ತೊಡಗಿಸಿಕೊಂಡಿದ್ದರು. ಎಂಜಿನಿಯರಿಂಗ್ ಓದುವಾಗ ಕ್ರೀಡಾ ಚಟುವಟಿಕೆಗೆ ‘ಬ್ರೇಕ್‌’ ಬಿತ್ತು. 2014ರಲ್ಲಿ ವೈಟ್‌ಫೀಲ್ಡ್‌ನಲ್ಲಿ ನಡೆದ 10 ಕಿಮೀ ಓಟ ಅವರಲ್ಲಿದ್ದ ಕ್ರೀಡಾಸ್ಫೂರ್ತಿಗೆ ಮತ್ತೆ ಜೀವ ತುಂಬಿತು. ಆ ನಂತರ ಅಲ್ಟ್ರಾ ರನ್ ಬಗ್ಗೆ ಒಲವು ಮೂಡಿತು. 21 ಕಿಮೀ, 42 ಕಿಮೀ, 50 ಕಿಮೀ ಮತ್ತು 80 ಕಿಮೀ ಓಡಿ ಭರವಸೆ ತುಂಬಿಕೊಂಡರು. ‘ಅಲ್ಟ್ರಾ ಓಟ’ಕ್ಕೆ ಬೇಕಾದ ಕಸುವು ದೇಹದಲ್ಲಿದೆ ಇದೆ ಎಂದು ಮನವರಿಕೆಯಾದ ಮೇಲೆ ಚಿತ್ತ ಪೂರ್ತಿ ಅತ್ತ ನೆಟ್ಟಿತು. 2019ರಲ್ಲಿ ಪುಣೆ ಬಳಿಯ ಲೋನಾವಾಲದಲ್ಲಿ ನಡೆದ 12 ತಾಸುಗಳ ಓಟದಲ್ಲಿ ಐದನೇ ಸ್ಥಾನ ಬಂತು. ಕಳೆದ ವರ್ಷದ ಫೆಬ್ರುವರಿಯಲ್ಲಿ ಚಂಡೀಗಢದಲ್ಲಿ ನಡೆದ 112 ಕಿಮೀ ಓಟದಲ್ಲಿ ರಾಷ್ಟ್ರೀಯ ದಾಖಲೆಯೂ ಅವರದಾಯಿತು. ಬೆಂಗಳೂರಿನ ಸ್ಪರ್ಧೆ ಅವರು ಪಾಲ್ಗೊಂಡ 24 ತಾಸುಗಳ ಮೊದಲ ಓಟ. ದೇಸಿ ಆಹಾರ; ಪಾಲಕರ ಪ್ರೋತ್ಸಾಹ ಕ್ರೀಡೆಯಲ್ಲಿ ಸಾಧನೆ ಮಾಡಲು ಪಾಲಕರ ಪ್ರೋತ್ಸಾಹದ ನುಡಿಗಳು, ಪತಿ ಸಂದೀಪ್‌ ಅವರ ಬೆಂಬಲವೇ ಕಾರಣ ಎಂದು ಹೇಳುವ ಅಶ್ವಿನಿ, ದೇಸಿ ಆಹಾರ ದೈಹಿಕ ತಾಕತ್ತಿಗೆ ನೆರವಾಗಿದೆ ಎನ್ನುತ್ತಾರೆ. ‘ತಂದೆಗೆ ಕ್ರೀಡೆ ಎಂದರೆ ಪ್ರಾಣ. ಶಾಲಾ ದಿನಗಳಲ್ಲಿ ಕ್ರೀಡಾ ಸಾಧನೆಗೆ ಪ್ರೋತ್ಸಾಹಿಸುತ್ತಿದ್ದರು. ಕ್ರೀಡಾಪಟು ಆಗಿದ್ದರೂ ವಿಶೇಷ ಪೋಷಕಾಂಶಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಮನೆ ಊಟದಲ್ಲೇ ದೇಹಕ್ಕೆ ಬೇಕಾದ ಎಲ್ಲವೂ ಸಿಗುತ್ತಿತ್ತು. ಈಗಲೂ ಹೊರಗಿನ ಆಹಾರ, ಫಾಸ್ಟ್‌ ಫುಡ್‌ ವರ್ಜ್ಯ. ವೃತ್ತಿಪರ ಓಟಗಾರ್ತಿಯಾಗಿದ್ದರೂ ವಿಶೇಷ ತರಬೇತಿ ಪಡೆಯುತ್ತಿಲ್ಲ. ಈಚೆಗೆ ಸ್ಟ್ರೆಂಥ ನಿಂಗ್‌ಗಾಗಿ ಪ್ರತ್ಯೇಕ ವ್ಯಾಯಾಮ ಮಾಡುತ್ತಿದ್ದೇನೆ. ಹೆಣ್ಣುಮಗಳು ಎಂದು ಅಪ್ಪ ಭೇದ ಮಾಡಲಿಲ್ಲ. ಹೀಗಾಗಿ ಸಜಹವಾಗಿ ಬೆಳೆದೆ. ಲೋನಾವಾಲದಲ್ಲಿ 27 ಪುರುಷರ ನಡುವೆ ಇದ್ದ ಏಕೈಕ ಮಹಿಳಾ ಸ್ಪರ್ಧಿ ನಾನು. ಆದರೂ ಯಾವುದೇ ಮುಜುಗರ ಇಲ್ಲದೆ ಪಾಲ್ಗೊಂಡೆ’ ಎನ್ನುತ್ತಾರೆ ಅಶ್ವಿನಿ. ಎಎಫ್‌ಐ ಮಾನ್ಯತೆ ಅಲ್ಟ್ರಾ ರನ್‌ನಲ್ಲಿ ಬೇರೆ ಬೇರೆ ವಿಧಾನಗಳಿವೆ. 12 ತಾಸುಗಳ ಓಟ ಮತ್ತು 24 ತಾಸುಗಳ ಓಟ ಈ ಪೈಕಿ ಪ್ರಮುಖ. ಅಂತರರಾಷ್ಟ್ರೀಯ ಅಲ್ಟ್ರಾ ರನ್‌ ಸಂಸ್ಥೆ ಮತ್ತು ಎನ್‌ಇಬಿ ಸ್ಪೋರ್ಟ್ಸ್‌ ಈ ಸ್ಪರ್ಧೆಗಳ ಆಯೋಜನೆಯ ಮುಂಪಕ್ತಿಯಲ್ಲಿವೆ. ವರ್ಲ್ಡ್‌ ಅಥ್ಲೆಟಿಕ್ಸ್‌ (ವಿಶ್ವ ಅಥ್ಲೆಟಿಕ್ಸ್ ಫೆಡರೇಷನ್) ಮಾನ್ಯತೆ ನೀಡಿರುವ ಈ ಕ್ರೀಡೆಯ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳಲು ಭಾರತೀಯರಿಗೆ ಭಾರತ ಅಥ್ಲೆಟಿಕ್‌ ಫೆಡರೇ ಷನ್ ಮಾನದಂಡ ನಿರ್ಧರಿಸಿದೆ. ನಿರ್ದಿಷ್ಟ ಅವಧಿಯಲ್ಲಿ ಇಂತಿಷ್ಟು ದೂರ ಕ್ರಮಿಸಬೇಕು ಎಂಬುದು ನಿಯಮ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.