ಅಥ್ಲೀಟ್ ಹಿಮಾ ದಾಸ್‌ಗೆ ಡಿಎಸ್‌ಪಿ ಹುದ್ದೆ ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಅಥ್ಲೀಟ್ ಹಿಮಾ ದಾಸ್ ಅವರನ್ನು ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ (ಡಿಎಸ್‌ಪಿ) ಹುದ್ದೆಗೆ ಅಸ್ಸಾಂ ರಾಜ್ಯ ಸರ್ಕಾರವು ನೇಮಕ ಮಾಡಿದೆ. ’ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಸರ್ವಾನಂದಸೋನವಾಲ್ ಮತ್ತು ಹಿಮಂತ್‌ ಬಿಸ್ವಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆ ನೀಡಿರುವುದಕ್ಕೆ ಆಭಾರಿಯಾಗಿದ್ದೇನೆ. ರಾಜ್ಯ ಮತ್ತು ದೇಶಕ್ಕೆ ಉತ್ತಮ ಕೊಡುಗೆ ನೀಡುತ್ತೇನೆ‘ ಎಂದು ಹಿಮಾ ದಾಸ್ ಟ್ವೀಟ್ ಮಾಡಿದ್ದಾರೆ. ’ಅಸ್ಸಾಂ ಸರ್ಕಾರವು ಶ್ಲಾಘನೀಯ ಕಾರ್ಯ ಮಾಡಿದೆ. ವೇಗದ ರಾಣಿಗೆ ಈ ಗೌರವ ನೀಡಿದ ಕಾರ್ಯವು ಅನುಕರಣೀಯ‘ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅಭಿನಂದಿಸಿದ್ದಾರೆ. ’ಧಿಂಗ್ ಎಕ್ಸ್‌ಪ್ರೆಸ್‌‘ ಎಂದೇ ಖ್ಯಾತರಾಗಿರುವ 21 ವರ್ಷದ ಹಿಮಾ, ಅಸ್ಸಾಂ ಕುಗ್ರಾಮದಲ್ಲಿ ಜನಿಸಿ, ವಿಶ್ವಮಟ್ಟದ ಅಥ್ಲೀಟ್ ಆಗಿ ಬೆಳೆದಿದ್ದಾರೆ. ಮುಂಬರಲಿರುವ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಿದ್ಧತೆ ನಡೆಸಿದ್ದಾರೆ. ವಿಶ್ವ ಜೂನಿಯರ್ ಅಥ್ಲೆಟಿಕ್ಸ್‌ನ ಮಹಿಳೆಯರ 400 ಮೀಟರ್ಸ್ ಓಟದಲ್ಲಿ ಚಾಂಪಿಯನ್ ಆಗಿದ್ದರು. 2018ರ ಏಷ್ಯನ್ ಗೇಮ್ಸ್‌ನಲ್ಲಿ 400 ಮೀಟರ್ಸ್‌ ಓಟದಲ್ಲಿ ಬೆಳ್ಳಿ ವಿಜೇತರಾಗಿದ್ದರು. ಮಹಿಳೆಯರ 400 ಮೀ ರಿಲೆ ಮತ್ತು ಮಿಶ್ರ 400 ಮೀ ರಿಲೆಯಲ್ಲಿ ಚಿನ್ನ ಗೆದ್ದ ತಂಡಗಳಲ್ಲಿ ಹಿಮಾ ಇದ್ದರು. ’ಹಿಮಾ ಅವರು ಡಿಎಸ್‌ಪಿ ಆದ ನಂತರ ಕ್ರೀಡೆಯನ್ನು ತ್ಯಜಿಸುವರೇ ಎಂದು ಬಹಳಷ್ಟು ಮಂದಿ ಕೇಳುತ್ತಿದ್ದಾರೆ. ಆತಂಕಪಡುವ ಅಗತ್ಯ ಇಲ್ಲ. ಅವರು ದೇಶದ ತಂಡದಲ್ಲಿ ತಮ್ಮ ಅಭ್ಯಾಸ ಮುಂದುವರಿಸುವರು. ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರತಿನಿಧಿಸುವರು‘ ಎಂದು ರಿಜಿಜು ಸ್ಪಷ್ಟಪಡಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.