ಮಾಂಟೆನೆಗ್ರೊ ಬಾಕ್ಸಿಂಗ್‌ ಟೂರ್ನಿ: ವಿಂಕಾ, ಸನಾಮಚಾ ಚಾನು ಚಿನ್ನದ ‘ಪಂಚ್‌’ ನವದೆಹಲಿ: ಅಮೋಘ ಸಾಮರ್ಥ್ಯ ತೋರಿದ ಭಾರತದ ಮಹಿಳಾ ಬಾಕ್ಸರ್‌ಗಳಾದ ವಿಂಕಾ (60 ಕೆಜಿ ವಿಭಾಗ) ಹಾಗೂ ಟಿ.ಸನಾಮಚಾ ಚಾನು (75 ಕೆಜಿ) ಅವರು ಮಾಂಟೆನೆಗ್ರೊದ ಬುದ್ವಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನದ ಪದಕಗಳಿಗೆ ಮುತ್ತಿಟ್ಟರು. ಎರಡು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳೂ ಭಾನುವಾರ ಭಾರತದ ಬಾಕ್ಸರ್‌ಗಳ ಪಾಲಾದವು. ಶನಿವಾರ ಅಲ್ಫಿಯಾ ಪಠಾಣ್ (+81 ಕೆಜಿ) ಭಾರತದ ಪರ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದರು. ರೋಹ್ಟಕ್‌ನ ವಿಂಕಾ ಅವರು ಫೈನಲ್‌ನಲ್ಲಿ 5–0ಯಿಂದ ಮೊಲ್ಡೊವಾದ ಕ್ರಿಸ್ಟಿನಾ ಕ್ರಿಪರ್‌ ಅವರನ್ನು ಸುಲಭವಾಗಿ ಮಣಿಸಿದರು. 75 ಕೆಜಿ ವಿಭಾಗದಲ್ಲಿ ಮಣಿಪುರದ ಸನಾಮಚಾ ಚಾನು ಇಷ್ಟೇ ಅಂತರದಿಂದ ಭಾರತದವರೇ ಆದ ರಾಜ್ ಸಹೀಬಾ ಅವರನ್ನು ಸೋಲಿಸಿದರು. 48 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ ಭಾರತದ ಗೀತಿಕಾ 1–4ರಿಂದ ಉಜ್ಬೆಕಿಸ್ತಾನದ ಫರ್ಜೋನಾ ಎದುರು ಮಣಿದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, 57 ಕೆಜಿ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ 1–4ರಿಂದ ಮೊಂಟೆನೆಗ್ರೊದ ಬೋಜನಾ ಗೋಜ್‌ಕೊವಿಚ್ ಎದುರು ಸೋತ ಪ್ರೀತಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಪುರುಷರ ವಿಭಾಗದ ಸೆಮಿಫೈನಲ್‌ ಬೌಟ್‌ಗಳಲ್ಲಿ ಮಣಿದ ಪ್ರಿಯಾಂಶು ದಾಸ್‌ (49 ಕೆಜಿ) ಹಾಗೂ ಜುಗ್ನೂ (91+ ಕೆಜಿ) ಕೂಡ ಕಂಚಿನ ಪದಕಗಳಿಗೆ ಒಡೆಯರಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.