ಬಾಕ್ಸಿಂಗ್ ಟೂರ್ನಿ: ಎಂಟರಘಟ್ಟಕ್ಕೆ ದೀಪಕ್‌ ಕುಮಾರ್ ನವದೆಹಲಿ: ಏಷ್ಯನ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಭಾರತದ ದೀಪಕ್ ಕುಮಾರ್ ಅವರು ಬಲ್ಗೇರಿಯಾದ ಸೋಫಿಯಾದಲ್ಲಿ ಆರಂಭವಾದ ಸ್ಟ್ರ್ಯಾಂಡ್‌ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯ ಕ್ವಾರ್ಟರ್‌ಫೈನಲ್ ತಲುಪಿದರು. 2019ರ ಇಂಡಿಯಾ ಓಪನ್‌ನಲ್ಲಿ ಚಿನ್ನದ ಪದಕ ಕೂಡ ಗೆದ್ದಿರುವ ದೀಪಕ್ 52 ಕೆಜಿ ವಿಭಾಗದಲ್ಲಿ 5–0ಯಿಂದ ಕಜಕಸ್ತಾನದ ಓಲ್ಜಾಸ್ ಬೈನಿಯಜೊವ್ ಅವರನ್ನು ಮಣಿಸಿ ಎಂಟರಘಟ್ಟ ತಲುಪಿದರು. ಸೋಮವಾರ ನಡೆದ ಇತರ ಬೌಟ್‌ಗಳಲ್ಲಿ 91 ಕೆಜಿ ವಿಭಾಗದಲ್ಲಿ ನವೀನ್ ಕುಮಾರ್ ಹಾಗೂ ಮಹಿಳೆಯರ ವಿಭಾಗದಲ್ಲಿ ಜ್ಯೋತಿ (51 ಕೆಜಿ) ಕೂಡ ಗೆಲುವು ಸಾಧಿಸಿದರು. ನವೀನ್ ಅವರು 3–2ರಿಂದ ಅಮೆರಿಕದ ಡೇರಿಯಸ್ ಫುಲ್ಗುಮ್ ಎದುರು ಗೆದ್ದರೆ, ಜ್ಯೋತಿ ಅವರಿಗೆ 4–1ರಿಂದ ಉಕ್ರೇನ್‌ನ ತೇತಿಯಾನ ಕೋಬ್ ವಿರುದ್ಧ ಜಯ ಒಲಿಯಿತು. ಶಶಿ ಚೋಪ್ರಾ (60 ಕೆಜಿ), ಲಲಿತಾ (69 ಕೆಜಿ) ಹಾಗೂ ಸಾಕ್ಷಿ (57 ಕೆಜಿ) ಅವರು ಮೊದಲ ಸುತ್ತುಗಳಲ್ಲೇ ಸೋತು ನಿರ್ಗಮಿಸಿದರು. ಪುರುಷರ ವಿಭಾಗಗಳಲ್ಲಿ ನವೀನ್ ಬೂರಾ (69 ಕೆಜಿ) ಹಾಗೂ ಅಂಕಿತ್‌ ಖತಾನ (75 ಕೆಜಿ) ಅವರಿಗೆ ಬೈ ಸಿಕ್ಕಿದ್ದು, ಪ್ರೀಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.