ಏಷ್ಯನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಫೈನಲ್‌ಗೆ ರೋಹಿತ್, ಭರತ್‌ ನವದೆಹಲಿ: ಅಮೋಘ ಸಾಮರ್ಥ್ಯ ತೋರಿದ ಭಾರತದ ಮೂವರು ಬಾಕ್ಸರ್‌ಗಳು ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿದ್ದಾರೆ. ರೋಹಿತ್‌ ಚಮೋಲಿ (48 ಕೆಜಿ ವಿಭಾಗ), ಭರತ್‌ ಜೂನ್‌ (+81 ಕೆಜಿ) ಪುರುಷರ ವಿಭಾಗದಲ್ಲಿ ಮತ್ತು ಮುಸ್ಕಾನ್‌ (46 ಕೆಜಿ) ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟವರು. ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್ ಬೌಟ್‌ಗಳಲ್ಲಿ ಭರತ್‌ 5–0ಯಿಂದ ಕಿರ್ಗಿಸ್ತಾನದ ಎಮಿರ್‌ ಖಾನ್‌ ರಜಪೊವ್ ಎದುರು, ರೋಹಿತ್ ಅವರು ಇಷ್ಟೇ ಅಂತರದಿಂದ ಕಜಕಸ್ತಾನದ ಐದರ್‌ ಖದೀರ್‌ಖಾನ್‌ ಅವರನ್ನು ಮಣಿಸಿದರು. ಮುಸ್ಕಾನ್ ಅವರು ಕೂಡ ಕಜಕಸ್ತಾನದ ಯೆಲ್ಯಾನೂರ್‌ ತುರ್ಗನೊವಾ ಎದುರು 5–0ಯಿಂದ ಗೆದ್ದರು. ಸುಪ್ರಿಯಾ ರಾವತ್‌ (66 ಕೆಜಿ) 1–4ರಿಂದ ಸನೊವಾರ್ ಬೊಜೊರ್ಬೊವಾ ಎದುರು, ಆರ್ಜೂ (54 ಕೆಜಿ) 2–3ರಿಂದ ಉಜ್ಬೆಕಿಸ್ತಾನದ ಗುಲ್‌ದಾನಾ ತಿಲೆರ್ಜೆನ್ ಎದುರು ಸೋತು ಕಂಚಿನ ಪದಕಗಳಿಗೆ ಸಮಾಧಾನಪಟ್ಟರು. ದೇವಿಕಾ ಘೋರ್ಪಡೆ (50 ಕೆಜಿ) 0–5ರಿಂದ ಉಜ್ಬೆಕಿಸ್ತಾನದ ಶೈನಾ ನೆಮತೊವೈನ್‌ ಎದುರು ಮತ್ತು ಅಂಕುಶ್‌ (66 ಕೆಜಿ) ಅಷ್ಟೇ ಅಂತರದಿಂದ ಉಜ್ಬೆಕಿಸ್ತಾನದ ಫಜ್ಲಿದ್ದೀನ್‌ ಎರ್ಕಿನ್‌ಬೊವ್ ಎದುರು ಸೋತು ಕಂಚು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.