ಚಿನ್ನ ಗೆದ್ದ ಪೂವಮ್ಮ: ದ್ಯುತಿ ಹಿಂದಿಕ್ಕಿದ ಧನಲಕ್ಷ್ಮಿ ಪಟಿಯಾಲ: ಕರ್ನಾಟಕದ ಎಂ.ಆರ್. ಪೂವಮ್ಮ ಅವರು ಫೆಡರೇಷನ್ ಕಪ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 400 ಮೀ. ಓಟದಲ್ಲಿ ಮಂಗಳವಾರ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ರಾಷ್ಟ್ರೀಯ ದಾಖಲೆ ಹಿಂದಿರುವ ದ್ಯುತಿ ಚಾಂದ್ ಅವರನ್ನು ಹಿಂದಿಕ್ಕಿದ ತಮಿಳುನಾಡಿನ ಧನಲಕ್ಷ್ಮಿ ಅವರು ಮಹಿಳೆಯರ 100 ಮೀ. ಓಟದಲ್ಲಿ ಮೊದಲಿಗರಾದರು. ಇಲ್ಲಿಯ ಎನ್‌ಐಎಸ್ ಆವರಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀ. ಓಟದಲ್ಲಿ ಪೂವಮ್ಮ 53.57 ಸೆಕೆಂಡುಗಳಲ್ಲಿ ಗುರಿ ತಲುಪಿದರು. ತಮಿಳುನಾಡಿನ ಶುಭಾ ವೆಂಟಕೇಶನ್‌ (54.48) ಹಾಗೂ ಹರಿಯಾಣದ ಕಿರಣ್ ಪಹಾಲ್‌ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡರು. 100 ಮೀ. ವಿಭಾಗದಲ್ಲಿ ಧನಲಕ್ಷ್ಮಿ 11.39 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಒಡಿಶಾದ ದ್ಯುತಿ (11.58) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ತಮಿಳುನಾಡಿನವರೇ ಆದ ಅರ್ಚನಾ ಸುಶೀಂದ್ರನ್‌ (11.76) ಕಂಚು ಒಲಿಸಿಕೊಂಡರು. ಹಿಮಾ ಅನರ್ಹ: ಪ್ರಮುಖ ಅಥ್ಲೀಟ್ ಹಿಮಾ ದಾಸ್ ಅವರು 100 ಮೀ. ಓಟದಲ್ಲಿ ಸ್ಪರ್ಧಿಸಿದ್ದರು. ಆದರೆ ಓಟ ಆರಂಭಿಸುವ ಸಂದರ್ಭದಲ್ಲಿ ಮಾಡಿದ ಪ್ರಮಾದದಿಂದಾಗಿ ಅನರ್ಹಗೊಂಡರು. ಪುರುಷರ 100 ಮೀ. ವಿಭಾಗದ ಚಿನ್ನದ ಪದಕವು ಪಂಜಾಬ್‌ನ ಗುರಿಂದರ್‌ವೀರ್‌ ಸಿಂಗ್ (10.32 ಸೆಕೆಂಡು) ಅವರ ಪಾಲಾಯಿತು. ತಮಿಳುನಾಡಿನ ಇಳಕ್ಕಿಯದಾಸನ್ ಕಣ್ಣಾದ (10.43) ಹಾಗೂ ಮಹಾರಾಷ್ಟ್ರದ ಸತೀಶ್ ಕೃಷ್ಣಕುಮಾರ್‌ (10.56) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ಈ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಒಡಿಶಾದ ಅಮಿಯಾ ಕುಮಾರ್ ಮಲಿಕ್ (10.75) ಏಳನೇ ಸ್ಥಾನಕ್ಕೆ ಕುಸಿದರು. ಪುರುಷರ 100 ಮೀ. ವಿಭಾಗದಲ್ಲಿ ಒಲಿಂಪಿಕ್ಸ್ ಅರ್ಹತೆ ಮಾನದಂಡ 10.05 ಸೆಕೆಂಡು ಆಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.