ಮಿಶ್ರ ಸಮರ ಕಲೆ ಫೈಟರ್‌ ಮೊಹಮ್ಮದ್‌ ಫರಾದ್‌ಗೆ ಸನ್ಮಾನ ಬೆಂಗಳೂರು: ಬಹರೇನ್‌ನಲ್ಲಿ ಇತ್ತೀಚೆಗೆ ನಡೆದ ಮಿಶ್ರ ಸಮಲ ಕಲೆ (ಮಿಕ್ಸ್‌ಡ್‌ ಮಾರ್ಷಲ್‌ ಆರ್ಟ್‌) ಫೈಟ್‌ನಲ್ಲಿ ಪಾಕಿಸ್ತಾನದ ಉಲೂಮಿ ಕರೀಮ್‌ ಎದುರು ಜಯ ಗಳಿಸಿ ಪ್ರಶಸ್ತಿ ಗೆದ್ದ ಬೆಂಗಳೂರಿನ ಫೈಟರ್‌ ಮೊಹಮ್ಮದ್‌ ಫರಾದ್‌ ಅವರನ್ನು ಬುಧವಾರ ಸನ್ಮಾನಿಸಲಾಯಿತು. ರಾಜ್ಯ ಫುಟ್‌ಬಾಲ್‌ ಸಂಸ್ಥೆ, ನಲಪಾಡ್‌ ಅಕಾಡೆಮಿ ಹಾಗೂ ಬೌರಿಂಗ್‌ ಇನ್ಸ್‌ಟಿಟ್ಯೂಟ್‌ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಫರಾದ್‌ ‘ಜಗತ್ತಿನಾದ್ಯಂತ ಹೆಚ್ಚು ಹೆಸರು ಮಾಡುತ್ತಿರುವ ಎಂಎಂಎ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ದೈಹಿಕ ಶ್ರಮ ಹಾಗೂ ಶಕ್ತಿ ಬೇಕು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಫೈಟರ್‌ ವಿರುದ್ಧ ಜಯ ಗಳಿಸಿದ್ದು ಖುಷಿ ನೀಡಿದೆ’ ಎಂದರು. ರಾಜ್ಯ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ‘ಮಿಶ್ರ ಸಮರ ಕಲೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚುದೈಹಿಕ ಶಕ್ತಿ ಬೇಕು. ಇಂಥ ಕ್ರೀಡೆಯಲ್ಲಿ ನಗರದ ಯುವಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ’ ಎಂದರು. ನಲಪಾಡ್‌ ಅಕಾಡೆಮಿಯ ನಿರ್ದೇಶಕ ಒಮರ್‌ ನಲಪಾಡ್‌ ಹ್ಯಾರಿಸ್‌, ಅಖಿಲ ಭಾರತ ಮಿಶ್ರ ಸಮರ ಕಲೆ ಫೆಡರೇಷನ್‌ ಪ್ರಧಾನ ಅಧ್ಯಕ್ಷ ಆದಿತ್ಯ,ಕಾರ್ಯದರ್ಶಿ ಅಬ್ದುಲ್‌ ಮುನೀರ್‌, ಬೌರಿಂಗ್‌ ಇನ್ಸ್‌ಟಿಟ್ಯೂಟ್‌ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್‌ ಮತ್ತಿತರರು ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.