ಗಾಲ್ಫ್‌: ಅಗ್ರ ಸ್ಥಾನದಲ್ಲಿ ಚಿಕ್ಕರಂಗಪ್ಪ ಗುರುಗ್ರಾಮ: ಹಾಲಿ ಚಾಂಪಿಯನ್‌, ಬೆಂಗಳೂರಿನ ಚಿಕ್ಕರಂಗಪ್ಪ ಅಮೋಘ ಆಟವಾಡಿ ದೆಹಲಿ–ಎನ್‌ಸಿಆರ್‌ ಮುಕ್ತ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಜಂಟಿಯಾಗಿ ದಿನದ ಉತ್ತಮ ಗರಿಷ್ಠ ಮೊತ್ತ ಹಂಚಿಕೊಂಡರು. ಅಗ್ರಸ್ಥಾನವನ್ನೂ ತಮ್ಮದಾಗಿಸಿಕೊಂಡರು. ಎರಡನೇ ದಿನದ ಅಂತ್ಯಕ್ಕೆ ಸ್ಥಳೀಯ ಗಾಲ್ಫರ್ ತಾಪಿ ಘಾಯ್ ಮತ್ತು ಚಂಡೀಗಢದ ಹರೇಂದ್ರ ಗುಪ್ತಾ ಜಂಟಿಯಾಗಿ ಎರಡನೇ ಸ್ಥಾನವನ್ನು ಹಂಚಿಕೊಂಡರು. ಈ ವರೆಗೆ 14 ಪ್ರಶಸ್ತಿಗಳನ್ನು ಗೆದ್ದಿರುವ 27 ವರ್ಷದ ಚಿಕ್ಕರಂಗಪ್ಪ ಮೊದಲ ದಿನವಾದ ಮಂಗಳವಾರದ ಮುಕ್ತಾಯಕ್ಕೆ 12ನೇ ಸ್ಥಾನದಲ್ಲಿದ್ದರು. ಎರಡನೇ ದಿನ ಆರಂಭದಿಂದಲೇ ಅಮೋಘ ಆಟವಾಡಿ ಗಮನ ಸೆಳೆದರು. ’ದಿನದ ಆರಂಭ ಉತ್ತಮವಾಗಿತ್ತು. ಚೆಂಡನ್ನು ಚೆನ್ನಾಗಿ ಹೊಡೆಯಲು ಸಾಧ್ಯವಾಯಿತು. ಸವಾಲಿನ ಸಂದರ್ಭಗಳನ್ನು ತಾಳ್ಮೆಯಿಂದ ನಿಭಾಯಿಸಿದೆ. ಹೀಗಾಗಿ ಉತ್ತಮ ಸಾಧನೆ ಮಾಡಿದೆ‘ ಎಂದು ಚಿಕ್ಕರಂಗಪ್ಪ ಹೇಳಿದರು. ಬೆಂಗಳೂರಿನ ಖಲಿನ್ ಜೋಶಿ ಅವರು ಅಜಿತೇಶ್‌ ಜೊತೆ ನಾಲ್ಕನೇ ಸ್ಥಾನ ಹಂಚಿಕೊಂಡರು. ಪುಣೆಯ ಉದಯನ್ ಮಾನೆ, ಪಟ್ನಾದ ಅಮನ್ ರಾಜ್ ಮತ್ತು ನೋಯ್ಡಾದ ಗೌರವ್‌ ಪ್ರತಾಪ್ ಸಿಂಗ್ ಕೂಡ ಗಮನ ಸೆಳೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.