ಏಷ್ಯನ್ ಯೂತ್ ಬಾಕ್ಸಿಂಗ್‌: ಫೈನಲ್‌ಗೆ ವಿಶ್ವಾಮಿತ್ರ ನವದೆಹಲಿ : ವಿಶ್ವ ಯೂತ್ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ವಿಶ್ವಾಮಿತ್ರ ಚೋಂಗ್‌ಥಮ್ ಸೇರಿದಂತೆ ಭಾರತದ ಮೂವರು ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ವಿಶ್ವಾಮಿತ್ರ ಅವರು ಶುಕ್ರವಾರ ನಡೆದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ 5–0ಯಿಂದ ತಜಿಕಿಸ್ತಾನದ ಅಬ್ದುರ್‌ ಅಖಿವೊಂಜೊಡಾ ಅವರನ್ನು ಪರಾಭವಗೊಳಿಸಿದರು. ಸುರೇಶ್‌ ವಿಶ್ವನಾಥ್‌ (48 ಕೆಜಿ) ಮತ್ತು ಜಯದೀಪ್ ರಾವತ್ (57 ಕೆಜಿ) ಪ್ರಶಸ್ತಿ ಸುತ್ತಿಗೆ ತಲುಪಿದ ಇನ್ನುಳಿದ ಇಬ್ಬರು. ಸೆಮಿಫೈನಲ್‌ ಬೌಟ್‌ನಲ್ಲಿ ಸುರೇಶ್‌ 5–0ಯಿಂದ ಬಹರೇನ್‌ನ ಫ್ಯಾಡೆಲ್ ಸಯೀದ್ ಅವರನ್ನು ಸೋಲಿಸಿದರೆ, ರಾವತ್‌ 3–2ರಿಂದ ಕಿರ್ಗಿಸ್ತಾನದ ಬೆಕ್‌ಬೊಲ್‌ ಮುರಾಸ್‌ಬೆಕೊವ್ ಎದುರು ಗೆದ್ದು ಮುನ್ನಡೆದರು. ಮಹಿಳೆಯರ 70 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಲಾಶು ಯಾದವ್‌ ಮತ್ತು ದೀಪಕ್‌ (ಪುರುಷರ 70 ಕೆಜಿ) ಸೆಮಿಫೈನಲ್‌ಗಳಲ್ಲಿ ಸೋತು ಕಂಚಿನ ಪದಕಗಳಿಗೆ ಸಮಾಧಾನಪಟ್ಟರು. ಲಾಶು ಅವರು 0–5ರಿಂದ ಕಜಕಸ್ತಾನದ ಗೌಖಾರ್‌ ಶೈಬೆಕೊವ್ ಎದುರು ಮತ್ತು ದೀಪಕ್‌ 1–4ರಿಂದ ಕಜಕಸ್ತಾನದ ಅಲಿಯಸ್ಕರೊವ್‌ ಬಾಕ್‌ಬರ್ಜೆನ್ ಎದುರು ನಿರಾಸೆ ಅನುಭವಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.