ಒಲಿಂಪಿಕ್ಸ್‌: ಕ್ರೀಡಾಪಟುಗಳಿಗೆ ಚೀನಾದಿಂದ ಲಸಿಕೆ ಟೋಕಿಯೊ: ಈ ವರ್ಷದ ಒಲಿಂಪಿಕ್ಸ್ ಮತ್ತು ಮುಂದಿನ ವರ್ಷ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಲಸಿಕೆ ನೀಡಲು ಚೀನಾ ಒಲಿಂಪಿಕ್ ಸಮಿತಿ ಮುಂದಾಗಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಗುರುವಾರ ತಿಳಿಸಿದೆ. ಟೋಕಿಯೊದಲ್ಲಿ ಕಳೆದ ವರ್ಷ ನಡೆಯಬೇಕಾಗಿದ್ದ ಒಲಿಂಪಿಕ್ ಕೂಟವನ್ನು ಕೋವಿಡ್‌–19ರ ಕಾರಣದಿಂದ ಮುಂದೂಡಲಾಗಿದ್ದು ಈ ವರ್ಷದ ಜುಲೈ 23ರಿಂದ ಆಗಸ್ಟ್ ಎಂಟರ ವರೆಗೆ ನಡೆಸಲು ನಿರ್ಧರಿಸಲಾಗಿದೆ. ಚಳಿಗಾಲದ ಒಲಿಂಪಿಕ್ಸ್‌ ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯಲಿದೆ. ‘ಎರಡೂ ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಳ್ಳುವವರಿಗಾಗಿ ಹೆಚ್ಚುವರಿ ಲಸಿಕೆ ತಯಾರಿಸಲು ಚೀನಾ ಮುಂದಾಗಿದೆ’ ಎಂದು ತಿಳಿಸಿದ ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಎಷ್ಟು ಮಂದಿಗೆ ಲಸಿಕೆ ಸಿಗಲಿದೆ ಎಂಬ ಮಾಹಿತಿ ನೀಡಲಿಲ್ಲ. ಒಲಿಂಪಿಕ್ಸ್‌ನಲ್ಲಿ ಸಾಮಾನ್ಯವಾಗಿ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು, ಸಾವಿರಾರು ಸಂಖ್ಯೆಯಲ್ಲಿ ಕೋಚ್‌ಗಳು, ಮಾಧ್ಯಮದವರು, ಅಧಿಕಾರಿಗಳು ಮತ್ತು ಸ್ವಯಂಸೇವಕರು ಇರುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.