ಇಶಾಗೆ ಆಘಾತ ನೀಡಿದ ರಂಗನಾಯಕಿ ಬೆಂಗಳೂರು: ಅಮೋಘ ಸಾಮರ್ಥ್ಯ ತೋರಿದ ಬೆಂಗಳೂರಿನ ರಂಗನಾಯಕಿ, ಮಹಿಳಾ ಅಂತರರಾಷ್ಟ್ರೀಯ ಮಾಸ್ಟರ್ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಇಶಾ ಶರ್ಮಾ ವಿರುದ್ಧ ಗೆದ್ದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಸಂಸ್ಥೆ ಆಯೋಜಿಸಿರುವ ರಾಜ್ಯ ಮುಕ್ತ ಚಾಂಪಿಯನ್‌ಷಿಪ್‌ನ ಮೂರನೇ ದಿನ ಗಮನ ಸೆಳೆದರು. 1783 ರೇಟಿಂಗ್ ಪಾಯಿಂಟ್‌ ಹೊಂದಿರುವ ರಂಗನಾಯಕಿ ತಮಗಿಂತ ಹೆಚ್ಚು ಪಾಯಿಂಟ್ ಗಳಿಸಿರುವ ಇಶಾ (2256) ಅವರನ್ನು ನಾಲ್ಕನೇ ಸುತ್ತಿನಲ್ಲಿ ಮಣಿಸಿದರು. ಆದರೆ ಐದನೇ ಸುತ್ತಿನಲ್ಲಿ ಬಾಲಕಿಶನ್‌ಗೆ ಮಣಿದು ನಿರಾಸೆ ಅನುಭವಿಸಿದರು. ಇಶಾ ಶರ್ಮಾ ಐದನೇ ಸುತ್ತಿನಲ್ಲಿ ಮೇಧಾಂಶ್ ಎದುರು ಗೆದ್ದು ಸಮಾಧಾನಪಟ್ಟುಕೊಂಡರು. ಮೂರನೇ ದಿನದ ಅಂತ್ಯಕ್ಕೆ ಸಂಜಯ್ ಎನ್‌, ಬಾಲಕಿಶನ್ ಮತ್ತು ಪಾರ್ಥಸಾರಥಿ ತಲಾ ಐದು ಪಾಯಿಂಟ್ ಗಳಿಸಿ ಅಗ್ರ ಸ್ಥಾನಗಳನ್ನು ಹಂಚಿಕೊಂಡರು. ಮಂಗಳೂರಿನ ಶರಣ್ ರಾವ್‌, ಸುದರ್ಶನ್ ಭಟ್‌, ತೇಜಸ್, ಓಜಸ್ ಮತ್ತು ಪ್ರಚುರ ಅವರು ತಲಾ 4.5 ಪಾಯಿಂಟ್ ಹೊಂದಿದ್ದಾರೆ. ಮೂರನೇ ದಿನದ (5ನೇ ಸುತ್ತು) ಫಲಿತಾಂಶಗಳು: ಸಂಜಯ್‌ಗೆ ರಕ್ಷಿತ್ ಶ್ರೀನಿವಾಸನ್ ಎದುರು ಗೆಲುವು; ಬಾಲಕಿಶನ್‌ಗೆ ರಂಗನಾಯಕಿ ವಿರುದ್ಧ ಜಯ, ಪಾರ್ಥಸಾರಥಿಗೆ ಅಪೂರ್ವಾ ಕಾಂಬ್ಳೆ ಎದುರು ಗೆಲುವು. ಪ್ರಚುರಗೆ ವಿವೇಕ್ ನಂಬಿಯಾರ್ ವಿರುದ್ಧ, ದಿಲೀಪ್‌ ಕುಮಾರ್‌ಗೆ ಹರ್ಷಿಣಿ ವಿರುದ್ಧ, ಇಶಾ ಶರ್ಮಾಗೆ ಮೇಧಾಂಶ್ ರಾಠಿ ಎದುರು, ಅರ್ಹನ್ ಚೇತನ್ ಆನಂದ್‌ಗೆ ವಿನೀತ್ ವಿರುದ್ಧ, ದರ್ಶನ್ ವಿ.ಪಿ.ಎನ್‌ಗೆ ಮನಸ್ವಿ ಎದುರು, ಲೀಲಾ ಜೈ ಕೃಷ್ಣಗೆ ನಿಶಾ ಪಾಟ್ಕರ್ ಎದುರು, ಅರವಿಂದ್ ರಾಮನಾಥ್‌ಗೆ ನಿಶಾಂತ್ ಡಿ ಸೋಜಾ ಎದುರು, ಶಾನ್ ಸಿ‌ಕ್ವೇರಾಗೆ ಹರಿಹರನ್ ಪಿಳ್ಳೆ ಎದುರು, ಸ್ಯಾಮ್ಯುಯೆಲ್ ಅಜಿತ್‌ಗೆ ಸಂಪತ್ ಕುಮಾರ್ ವಿರುದ್ಧ ಜಯ. ತೇಜಸ್ ಸುರೇಶ್‌ ಮತ್ತು ಓಜಸ್ ಕುಲಕರ್ಣಿ, ಸುದರ್ಶನ್ ಭಟ್ ಮತ್ತು ಶರಣ್ ರಾವ್‌, ಸುಜಯ್ ಮತ್ತು ತೇಜಸ್ ಕುಮಾರ್ ಡ್ರಾ ಮಾಡಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.