ಅಭ್ಯಾಸಕ್ಕೆ ನಿರ್ಬಂಧ: ಪ್ರತಿಭಟನೆಗೆ ಸಜ್ಜಾದ ಈಜು‍‍ಪಟುಗಳು ‌ಬೆಂಗಳೂರು: ಸತತ ಪ್ರಯತ್ನದ ನಂತರ ಅಭ್ಯಾಸಕ್ಕೆ ಅವಕಾಶ ಪಡೆದ ಕೆಲವೇ ತಿಂಗಳಲ್ಲಿ ಈಜುಗೊಳಗಳನ್ನು ಮತ್ತೆ ಮುಚ್ಚಲಾಗಿದೆ. ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶುಕ್ರವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು ಈಜುಕೊಳ ಮತ್ತು ಜಿಮ್‌ಗಳನ್ನು ಮುಚ್ಚುವುದು ಕೂಡ ಇದರಲ್ಲಿ ಸೇರಿದೆ. ಇದರಿಂದ ಈಜುಪಟುಗಳು ಬೇಸರಗೊಂಡಿದ್ದು ಆದೇಶ ರದ್ದುಗೊಳಿಸುವಂತೆ ಕೋರಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ನಗರದ ಡಾಲ್ಫಿನ್ ಈಜು ಕೇಂದ್ರ ಮತ್ತು ಪಡುಕೋಣೆ–ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ರಾಷ್ಟ್ರಮಟ್ಟದ ಈಜುಪಟುಗಳು ಅಭ್ಯಾಸ ಮಾಡುತ್ತಿದ್ದಾರೆ. ಮಾರ್ಚ್‌ 22ರಂದು ರಾಷ್ಟ್ರೀಯ ಶಿಬಿರ ಮುಗಿದಿತ್ತು. ಆದರೆ ಕೆಲವರು ಇಲ್ಲೇ ಉಳಿದು ತರಬೇತಿ ಪಡೆಯಲು ಬಯಸಿದ್ದರು. ಏಪ್ರಿಲ್ 20ರ ವರೆಗೆ ಈಜುಕೊಳಗಳನ್ನು ಮುಚ್ಚುವಂತೆ ಸೂಚಿಸಿರುವುದರಿಂದ ಅವರ ತರಬೇತಿಗೆ ಧಕ್ಕೆಯಾಗಿದೆ. ಒಲಿಂಪಿಕ್ಸ್ ಅರ್ಹತೆ ಪಡೆಯಬೇಕಾಗಿರುವ ಕೊನೆಯ ದಿನಾಂಕ ಸಮೀಪಿಸುತ್ತಿರುವುದರಿಂದ ಈಜುಪಟುಗಳು ಕೆಲವು ಪ್ರಮುಖ ಕೂಟಗಳಲ್ಲಿ ಪಾಲ್ಗೊಂಡು ಸಾಮರ್ಥ್ಯ ಪ್ರದರ್ಶಿಸಬೇಕಾಗಿದೆ. ಕರ್ನಾಟಕದ ಶ್ರೀಹರಿ ನಟರಾಜ್ ಸದ್ಯದಲ್ಲೇ ಅಂತರರಾಷ್ಟ್ರೀಯ ಕೂಟವೊಂದಕ್ಕೆ ತೆರಳುವ ಸಿದ್ಧತೆಯಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ತರಬೇತಿ ಮೊಟಕುಗೊಂಡಿರುವುದರಿಂದ ಈಜುಪಟುಗಳು ಭವಿಷ್ಯಕ್ಕೆ ತೊಂದರೆಯಾಗುವ ಆತಂಕದಲ್ಲಿದ್ದಾರೆ. ‘ಯಾವ ಮುನ್ಸೂಚನೆಯೂ ಇಲ್ಲದೆ ಈಜುಕೊಳಗಳನ್ನು ಮುಚ್ಚುವಂತೆ ತಾಕೀತು ಮಾಡಿದ್ದಾರೆ. ಇದರಿಂದ ಎಲ್ಲರಿಗೂ ಆಘಾತವಾಗಿದೆ. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಆರೋಗ್ಯ ಸಚಿವರು ಸೇರಿದಂತೆ ಹಲವು ಮಂದಿಗೆ ಶನಿವಾರ ಮನವಿ ಸಲ್ಲಿಸಲಾಗಿದ್ದು ಶೀಘ್ರದಲ್ಲೇ ಪೂರಕ ಸ್ಪಂದನೆ ಸಿಗುವ ನಿರೀಕ್ಷೆಯಲ್ಲಿದ್ದೇವೆ. ಈಜು ಅಭ್ಯಾಸಕ್ಕೆ ಅವಕಾಶ ನೀಡದೇ ಇದ್ದರೆ ಪ್ರತಿಭಟನೆ ನಡೆಸುವುದೊಂದೇ ದಾರಿ’ ಎಂದು ರಾಜ್ಯ ಈಜು ಸಂಸ್ಥೆಯ ಕಾರ್ಯದರ್ಶಿ ಎಂ. ಸತೀಶ ‘ಪ್ರಜಾವಾಣಿ’ಗೆ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.