ಬ್ಯಾಡ್ಮಿಂಟನ್‌: ತಾನ್ಯಾ ಹೇಮಂತ್ ರನ್ನರ್‌ಅಪ್‌ ಬೆಂಗಳೂರು: ಕರ್ನಾಟಕದ ತಾನ್ಯಾ ಹೇಮಂತ್ ಅವರು ಪೋಲಿಶ್ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ರನ್ನರ್ ಅಪ್ ಆಗಿದ್ದಾರೆ. ಪೋಲೆಂಡ್‌ನ ಗ್ನಿಜ್ನೊದಲ್ಲಿ ಇತ್ತೀಚೆಗೆ ನಡೆದ ಈ ಟೂರ್ನಿಯ ಫೈನಲ್‌ನಲ್ಲಿ ತಾನ್ಯಾ 22–24, 14–21ರಿಂದ ಈಸ್ಟೋನಿಯಾದ ಕ್ರಿಸ್ಟಿನಾ ಕೂಬಾ ಎದುರು ಸೋತಿದ್ದರು. ಕಳೆದ ವರ್ಷದ ಆಗಸ್ಟ್‌ನಲ್ಲಿ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿ (ಪಿಪಿಬಿಎ) ಹಾಗೂ ಐಸ್ಪೋರ್ಟ್ಸ್ ಅಕಾಡೆಮಿಗಳು ಒಪ್ಪಂದ ಮಾಡಿಕೊಂಡಿದ್ದವು. ಇಲ್ಲಿ ತರಬೇತಿ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಪೊಡಿಯಂ ಫಿನಿಶ್‘ ಮಾಡಿದ ಮೊದಲ ಜೂನಿಯರ್ ಆಟಗಾರ್ತಿ ಆಗಿದ್ದಾರೆ ತಾನ್ಯಾ. ಇದಕ್ಕೂ ಮೊದಲು ಫೆಬ್ರುವರಿಯಲ್ಲಿ ಉಗಾಂಡದ ಕಂಪಾಲದಲ್ಲಿ ನಡೆದ ಟೂರ್ನಿಯಲ್ಲಿ ತಾನ್ಯಾ ಕಂಚಿನ ಪದಕ ಗೆದ್ದುಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.