ಏಷ್ಯನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ರೋಹಿತ್‌ ಚಮೋಲಿ ಚಿನ್ನದ ಪಂಚ್ ನವದೆಹಲಿ: ರಾಷ್ಟ್ರೀಯ ಚಾಂಪಿಯನ್, ಭಾರತದ ರೋಹಿತ್‌ ಚಮೋಲಿ ಏಷ್ಯನ್ ಜೂನಿಯರ್ ಬಾಕ್ಸಿಂಗ್‌ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ದುಬೈನಲ್ಲಿ ಭಾನುವಾರ ನಡೆದ 48 ಕೆಜಿ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಅವರು ಮಂಗೋಲಿಯಾದ ಒಟ್‌ಗಾನ್‌ಬಯರ್‌ ತುವ್ಸಿಂಜಯ ಅವರನ್ನು ಮಣಿಸಿದರು. ತೀವ್ರ ಪೈಪೋಟಿಯಲ್ಲಿ ಮೊದಲ ಸುತ್ತಿನಲ್ಲಿ ಸೋತ ರೋಹಿತ್ ಬಳಿಕ ಅಬ್ಬರಿಸಿದರು. 3–2ರಿಂದ ಎದುರಾಳಿಗೆ ಸೋಲಿನ ಪಂಚ್‌ ನೀಡಿದರು. ಗೌರವ್‌ ಸೈನಿ (70 ಕೆಜಿ) ಮತ್ತು ಭರತ್ ಜೂನ್‌ (+81 ಕೆಜಿ) ಅವರು ಫೈನಲ್‌ನಲ್ಲಿ ಸೆಣಸಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಮುಸ್ಕಾನ್‌ (46 ಕೆಜಿ), ವಿಶು ರಾಠಿ (48 ಕೆಜಿ), ತನು (52 ಕೆಜಿ), ಆಂಚಲ್ ಸೈನಿ (57 ಕೆಜಿ), ನಿಖಿತಾ (60 ಕೆಜಿ), ಮಾಹಿ ರಾಘವ್‌ (63 ಕೆಜಿ), ರುದ್ರಿಕಾ (70 ಕೆಜಿ), ಪ್ರಾಂಜಲ್ ಯಾದವ್‌ (75 ಕೆಜಿ), ಸಂಜನಾ (81 ಕೆಜಿ) ಮತ್ತು ಕೀರ್ತಿ (+81 ಕೆಜಿ) ಈಗಾಗಲೇ ಫೈನಲ್‌ಗೆ ಲಗ್ಗೆಯಿಟ್ಟವರು. ಜೂನಿಯರ್ ವಿಭಾಗದಲ್ಲಿ ಭಾರತ ಈಗಾಗಲೇ ಆರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. 2019ರಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ನಡೆದ ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು 21 ಪದಕಗಳನ್ನು (ಆರು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಆರು ಕಂಚು) ಜಯಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.