ಪ್ಯಾರಾ ಬ್ಯಾಡ್ಮಿಂಟನ್‌: ಪ್ರಮೋದ್‌, ಕದಂ ಫೈನಲ್‌ಗೆ ದುಬೈ: ಭಾರತದ ಪ್ರಮೋದ್ ಭಗತ್ ಮತ್ತು ಸುಕಾಂತ್ ಕದಂ ಅವರು ದುಬೈ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಎಸ್‌ಎಲ್‌–3 ಮತ್ತು ಎಸ್‌ಎಲ್‌–4 ವಿಭಾಗದ ಫೈನಲ್ ಪ್ರವೇಶಿಸಿದರು. ಶನಿವಾರ ನಡೆದ ಎಸ್‌ಎಲ್‌–3 ವಿಭಾಗದ ಸೆಮಿಫೈನಲ್‌ನಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಪ್ರಮೋದ್‌ ಮಲೇಷ್ಯಾದ ಮೊಹಮ್ಮದ್ ಹುಜೈರಿ ಅಬ್ದುಲ್ ಮಲೆಕ್ ಎದುರು 21-7, 21-17ರಲ್ಲಿ ಗೆಲುವು ಸಾಧಿಸಿದರು. ಫೈನಲ್‌ನಲ್ಲಿ ಅವರು ಕುಮಾರ್ ನಿತೇಶ್ ವಿರುದ್ಧ ಸೆಣಸುವರು. ಪುರುಷರ ಡಬಲ್ಸ್‌ನಲ್ಲೂ ಪ್ರಮೋದ್ ಪ್ರಶಸ್ತಿ ಸುತ್ತು ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಪ್ರಮೋದ್ ಮತ್ತು ಮನೋಜ್ ಸರ್ಕಾರ್ ಜೋಡಿ ಭಾರತದ ಮೊಹಮ್ಮದ್ ಅನ್ಸಾರಿ ಮತ್ತು ದೀಪ್ ರಂಜನ್ ಬಿಸೋಯಿ ಎದುರು21-19, 23-21ರಲ್ಲಿ ಗೆಲುವು ಸಾಧಿಸಿದರು. ಫೈನಲ್‌ನಲ್ಲಿ ಅವರು ಸುಕಾಂತ್ ಕದಂ ಮತ್ತು ಕುಮಾರ್ ನಿತೇಶ್ ಜೋಡಿಯನ್ನು ಎದುರಿಸಲಿದ್ದಾರೆ. ಮಿಶ್ರ ಡಬಲ್ಸ್‌ ವಿಭಾಗದಿಂದ ಪ್ರಮೋದ್ ಹೊರಬಿದ್ದರು. ಪಾಲಾ ಕೊಹ್ಲಿ ಜೊತೆಗೂಡಿ ಕಣಕ್ಕೆ ಇಳಿದ ಅವರು ಫ್ರಾನ್ಸ್‌ನ ಲೂಕಾಸ್ ಮಜೂರ್ ಮತ್ತು ಫೌಸ್ಟಿನ್ ನೊಯೆಲ್ ಎದುರು17-21, 5-21ರಲ್ಲಿ ಸೋತರು. ಎಸ್‌ಎಲ್‌–4 ವಿಭಾಗದಲ್ಲಿ ಕದಂ ಜರ್ಮನಿಯ ಮಾರ್ಸೆಲ್ ಆ್ಯಡಂ ವಿರುದ್ಧ 21-11, 21-11ರಲ್ಲಿ ಜಯ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.