ಚಿನ್ನ ಗೆದ್ದ ವಿಜಯವೀರ್–ತೇಜಸ್ವಿನಿ ನವದೆಹಲಿ: ಭಾರತದ ವಿಜಯವೀರ್ ಸಿಧು ಹಾಗೂ ತೇಜಸ್ವಿನಿ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್ಎಫ್ ಶೂಟಿಂಗ್ ವಿಶ್ವಕಪ್ ಟೂರ್ನಿಯ ಮಿಶ್ರ ತಂಡ ವಿಭಾಗದ 25 ಮೀಟರ್ ರ‍್ಯಾಪಿಡ್‌ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಫೈನಲ್ಸ್ ಹಣಾಹಣಿಯಲ್ಲಿ ಅವರು 9–1ರಿಂದ ಭಾರತದವರೇ ಆದ ಗುರುಪ್ರೀತ್ ಸಿಂಗ್ ಸಂಧು ಹಾಗೂಅಭಿಜ್ಞಾ ಅಶೋಕ ಪಾಟೀಲ್ ಅವರನ್ನು ಹಿಂದಿಕ್ಕಿದರು. ಇದರೊಂದಿಗೆ ಭಾರತ ಗೆದ್ದ ಪದಕಗಳ ಸಂಖ್ಯೆ 27ಕ್ಕೇರಿತು. ಅದರಲ್ಲಿ 13 ಚಿನ್ನದ ಪದಕಗಳೂ ಸೇರಿವೆ. ಎರಡನೇ ಅರ್ಹತಾ ಸುತ್ತಿನಲ್ಲಿ ಗುರುಪ್ರೀತ್‌ ಹಾಗೂ ಅಭಿಜ್ಞಾ 370 ಸ್ಕೋರ್ ಗಳಿಸಿ ಅಗ್ರಸ್ಥಾನ ಗಳಿಸಿದ್ದರು. 16 ವರ್ಷದ ತೇಜಸ್ವಿನಿ ಹಾಗೂ 18ರ ಹರಯದ ಸಿಧು (368) ಎರಡನೇ ಸ್ಥಾನದಲ್ಲಿದ್ದರು. ಸಿಧು, ಶುಕ್ರವಾರ 25 ಮೀ. ರ‍್ಯಾಪಿಡ್‌ ಫೈರ್ ಪಿಸ್ತೂಲ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.