ಹಿಮದಲ್ಲಿ ಬಿದ್ದು, ಕ್ರೀಡಾಂಗಣದಲ್ಲಿ ‘ಎದ್ದ’ ವಿನೋದ್‌ ಬೆಂಗಳೂರು: ಸೇನೆಯಲ್ಲಿದ್ದ ತಂದೆ ಶತ್ರುಗಳಿಗೆ ಎದೆಯೊಡ್ಡಿ ಕಾಲು ಕಳೆದುಕೊಂಡರು. ಅನುಕಂಪೆಯ ಆಧಾರದಲ್ಲಿ ಕೆಲಸ ಸಿಕ್ಕಿತು. ಆದರೆ ಎರಡೇ ವರ್ಷದಲ್ಲಿ ಹಿಮದಡಿ ಸಿಲುಕಿ ಕಾಲುಗಳ ಸ್ವಾಧೀನ ಕಳೆದುಹೋಯಿತು. ಅಂಗಡಿ ಇಟ್ಟು ಜೀವನ ಸಾಗಿಸಲು ಪ್ರಯತ್ನಿಸುತ್ತಿರುವಾಗಲೇ ತಾಯಿ ಇಲ್ಲವಾದಳು. ದುರಂತಗಳು ಒಂದರ ಮೇಲೆ ಒಂದರಂತೆ ಬಂದು ಬಡಿದರೂ ಎದೆಗುಂದದ ವಿನೋದ್ ಕುಮಾರ್ ಮಲಿಕ್ ಕೊನೆಗೆ ಬದುಕು ಕಂಡುಕೊಂಡದ್ದು ಕ್ರೀಡೆಯಲ್ಲಿ; ಹರಿಯಾಣದ ಈ ಪ್ಯಾರಾ ಅಥ್ಲೀಟ್‌ಗೆ ಬೆಂಬಲವಾಗಿ ನಿಂತದ್ದು ಬೆಂಗಳೂರು. 2002ರಲ್ಲಿ ಸಿಯಾಚಿನ್‌ನಲ್ಲಿ ಸಂಭವಿಸಿದ ದುರಂತದಲ್ಲಿ ಬಿಎಫ್‌ಎಫ್‌ 22ನೇ ಬೆಟಾಲಿಯನ್‌ನ ವಿನೋದ್ ಕುಮಾರ್ ಒಳಗೊಂಡಂತೆ ನಾಲ್ವರು ಗುಡ್ಡ ಹತ್ತುವಾಗ ಜಾರಿ ಬಿದ್ದರು. ಮೂವರು ಸಾವಿಗೀಡಾಗಿದರು. ವಿನೋದ್ 24 ತಾಸು ಹಿಮದಡಿ ಇದ್ದರು. ಕಣ್ಣು ಬಿಟ್ಟದ್ದು ಸೇನಾ ಆಸ್ಪತ್ರೆಯಲ್ಲಿ. ಆಗ ಕಾಲುಗಳು ಮತ್ತು ಎಡಗೈಯಲ್ಲಿ ಸ್ವಾಧೀನ ಇರಲಿಲ್ಲ. ತಿಂಗಳುಗಳ ಚಿಕಿತ್ಸೆ ನಂತರ ಕುಳಿತುಕೊಳ್ಳಲಷ್ಟೇ ಸಾಧ್ಯವಾಯಿತು. ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ವಿನೋದ್ 2016ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ದೀಪಾ ಮಲಿಕ್ ಪದಕ ಗೆದ್ದಾಗ ಪುಳಕಗೊಂಡರು. ಅಂಗವಿಕಲರಿಗೆ ಕ್ರೀಡೆಯಲ್ಲಿ ಸಾಧನೆ ಮಾಡಲು ಅವಕಾಶ ಇದೆ ಎಂದು ತಿಳಿದದ್ದು ಆಗಲೇ. ‘30ನೇ ವಯಸ್ಸಿನಲ್ಲಿ ದೀಪಾ ಅವರು ಪದಕ ಗೆದ್ದಿದ್ದರು. ಅವರಿಗೆ ಸಾಧ್ಯವಾದದ್ದು ನಮಗ್ಯಾಗೆ ಆಗದು ಎಂದುಕೊಂಡು ಕ್ರೀಡಾ ಕ್ಷೇತ್ರಕ್ಕೆ ಲಗ್ಗೆ ಇಟ್ಟೆ’ ಎನ್ನುತ್ತಾರೆ ವಿನೋದ್‌. ರೋಹ್ತಕ್‌ನಲ್ಲಿ ಡಿಸ್ಕಸ್ ಥ್ರೋ ಅಭ್ಯಾಸ ಆರಂಭವಾಯಿತು. ಆದರೆ ಅವರ ಆಶಯ ನಿಜ ಅರ್ಥದಲ್ಲಿ ಈಡೇರಿದ್ದು ಸತ್ಯನಾರಾಯಣ ಅವರ ಪರಿಚಯ ಆದ ಮೇಲೆ. ದೆಹಲಿಯಲ್ಲಿ ಸತ್ಯನಾರಾಯಣ ಅವರನ್ನು ಭೇಟಿಯಾದ ಅವರು ಬೆಂಗಳೂರು ಸೇರಿದರು. ಸಾಯ್‌ ಕೇಂದ್ರದಲ್ಲಿ ಅಭ್ಯಾಸ ಆರಂಭವಾಯಿತು. ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಕೂದಲೆಳೆ ಅಂತರದಲ್ಲಿ ಕಂಚಿನ ಪದಕ ಕೈತಪ್ಪಿತು. ಆದರೆ ಈ ವರ್ಷದ ಫೆಬ್ರುವರಿಯಲ್ಲಿ ದುಬೈನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದು ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಟಿಕೆಟ್ ಗಿಟ್ಟಿಸಿಕೊಂಡರು. ಬೆಂಗಳೂರಿನಲ್ಲಿ ಚಿನ್ನದ ಸಂಭ್ರಮ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರೂ ಈ ವರೆಗೆ ಚಿನ್ನ ಗೆಲ್ಲಲಾಗದ ಕೊರಗು 41 ವರ್ಷದ ವಿನೋದ್ ಕುಮಾರ್‌ ಅವರನ್ನು ಕಾಡುತ್ತಿತ್ತು. ಆ ಬೇಸರ ಬೆಂಗಳೂರಿನಲ್ಲಿ ನೀಗಿದೆ. ಎಫ್‌ 53 ವಿಭಾಗದ ಸ್ಪರ್ಧಿಯಾಗಿರುವ ಅವರು ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಶುಕ್ರವಾರ 20.92 ಮೀಟರ್ಸ್ ಅಂತರದ ಸಾಧನೆಯೊಂದಿಗೆ ಚಿನ್ನ ಗೆದ್ದರು. ರಾಷ್ಟ್ರೀಯ ಮಟ್ಟದಲ್ಲಿ ಈ ಹಿಂದೆ ಮೂರು ಕಂಚಿನ ಪದಕಗಳು ಅವರಿಗೆ ಲಭಿಸಿದ್ದವು. ಬದುಕಿಗೆ ತಿರುವು ಕೊಟ್ಟ, ಕ್ರೀಡಾ ಜೀವನಕ್ಕೆ ಚಿನ್ನದ ಹೊಳಪು ನೀಡಿದ ಬೆಂಗಳೂರಿನ ಬಗ್ಗೆ ವಿನೋದ್ ಅಭಿಮಾನದ ನುಡಿಗಳನ್ನಾಡಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಇಲ್ಲಿನ ಹವಾಮಾನ ಕ್ರೀಡಾ ಸಾಧನೆಗೆ ಪೂರಕವಾಗಿದೆ. ಜನರಂತೂ ಹೃದಯ ವೈಶಾಲ್ಯ ಇರುವವರು’ ಎಂದರು. ‘ಜೀವನದಲ್ಲಿ ಆಗುವುದೆಲ್ಲವೂ ಒಳ್ಳೆಯದಕ್ಕೆ. ಕಷ್ಟಗಳು ಬಂದಾಗ ಧೈರ್ಯಗೆಡಬಾರದು. ಅಂಗಾಂಗಗಳಿಗೆ ವೈಕಲ್ಯ ಸಂಭವಿಸಿದರೂ ಮನಸ್ಸು ಗಟ್ಟಿಯಾಗಿರಬೇಕು. ಮುಂದೆ ಸಾಗಲು ಅದರಿಂದ ಅನುಕೂಲವಾಗುತ್ತದೆ’ ಎಂಬುದು ಅವರ ಸಿದ್ಧಾಂತ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.